ತಾಂತ್ರಿಕ ದೋಷ ಬಗೆಹರಿಸಲು ಇಂಜಿನಿಯರ್‌ಗಳ ಜೊತೆ‌ 50 ನಿಮಿಷ ಚರ್ಚಿಸಿದ ಪೈಲಟ್ – ಆದ್ರೂ ನೆಲಕ್ಕಪ್ಪಳಿಸಿದ F-35 ಜೆಟ್‌!

ವಾಷಿಂಗ್ಟನ್‌: ಅಲಸ್ಕಾ ವಿಮಾನ ನಿಲ್ದಾಣದಲ್ಲಿ ಅಮೆರಿಕ ವಾಯುಪಡೆಯ (US Air Force) ಎಫ್‌ -35 ಫೈಟರ್‌ ಜೆಟ್‌ (F-35 Fighter Jet) ಒಂದು ತಾಂತ್ರಿಕ ದೋಷದಿಂದ ಪಥನಗೊಂಡಿದೆ. ಇದಕ್ಕೂ ಮುನ್ನ ವಿಮಾನದ ತಾಂತ್ರಿಕ ದೋಷ ಬಗೆಹರಿಸಲು ಪೈಲಟ್‌, ಇಂಜಿನಿಯರ್‌ಗಳ ಜೊತೆ ಕಾನ್ಫರೆನ್ಸ್‌ ಕಾಲ್‌ನಲ್ಲಿ 50 ನಿಮಿಷ ಚರ್ಚಿಸಿದ್ದರು. ಆದರೂ ಅದು ಪ್ರಯೋಜನವಾಗಿಲ್ಲ.

ವಿಮಾನದ ಮುಂಭಾಗ ಮತ್ತು ಲ್ಯಾಂಡಿಂಗ್ ಗೇರ್‌ಗಳ ಹೈಡ್ರಾಲಿಕ್ ಲೈನ್‌ಗಳಲ್ಲಿನ ಮಂಜು ಮೆತ್ತಿಕೊಂಡಿತ್ತು. ಇದರಿಂದ ಟೇಕ್ ಆಫ್ ಆದ ನಂತರ, ಪೈಲಟ್ ಲ್ಯಾಂಡಿಂಗ್ ಗೇರ್ ಹಿಂತೆಗೆದುಕೊಳ್ಳಲು ಪ್ರಯತ್ನಿಸಿದರೂ ಸಹ ಸಾಧ್ಯವಾಗಲಿಲ್ಲ. ಮತ್ತೆ ಕೆಳಕ್ಕೆ ಇಳಿಸುವಾಗ, ಮುಂಭಾಗದ ಗೇರ್ ಲಾಕ್ ಆಗಿತ್ತು. ಈ ವೇಳೆ, ಸಮಸ್ಯೆ ಬಗೆ ಹರಿಸಲು ಪೈಲೆಟ್‌ ಕಾನ್ಫರೆನ್ಸ್‌ ಕಾಲ್‌ನಲ್ಲಿ ಇಂಜಿನಿಯರ್‌ಗಳ ಜೊತೆ‌ 50 ನಿಮಿಷ ಚರ್ಚಿಸಿದ್ದರು.  

ಪೈಲಟ್ “ಟಚ್ ಅಂಡ್ ಗೋ” ಲ್ಯಾಂಡಿಂಗ್‌ಗೆ ಪ್ರಯತ್ನಿಸಿದರು, ಆದರೆ ಆ ಪ್ರಯತ್ನ ಸಹ ವಿಫಲವಾಯಿತು. ಕೊನೆಯದಾಗಿ ಫೈಲೆಟ್‌ ವಿಮಾನದಿಂದ ಸುರಕ್ಷಿತವಾಗಿ ಪ್ಯಾರಾಚೂಟ್‌ ಮೂಲಕ ಎಜೆಕ್ಟ್‌ ಆಗಿದ್ದು, ವಿಮಾನ ನೆಲಕ್ಕೆ ಅಪ್ಪಳಿಸಿದೆ.

ವಿಮಾನ ನೆಲಕ್ಕೆ ಅಪ್ಪಳಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಮಾನ ಪಥನದ ಬಳಿಕ ಹೊತ್ತಿ ಉರಿದಿದ್ದು, ಸಂಪೂರ್ಣ ಭಸ್ಮವಾಗಿದೆ.