ಮಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿಯನ್ನು (Mahesh Shetty Thimarodi) ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ತಿಮರೋಡಿ, ಬಿ.ಎಲ್ ಸಂತೋಷ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್ ಕುಲಾಲ್ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BNS 196(1),352,353(2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತಿಮರೋಡಿಗೆ ಬ್ರಹ್ಮಾವರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. 2 ಬಾರಿ ನೋಟಿಸ್ ಜಾರಿಮಾಡಿದ್ದರೂ ವಿಚಾರಣೆಗೆ ಹಾಜರಾಗದ ಕಾರಣ ಉಜಿರೆಯ ಮನೆಯಲ್ಲಿ ಇಂದು ಬೆಳಗ್ಗೆ ವಶಕ್ಕೆ ಪಡೆಯಲಾಗಿತ್ತು. ಕೆಲಕಾಲ ವಿಚಾರಣೆ ಬಳಿಕ ಬಂಧಿಸಿದ್ದಾರೆ. ಇದನ್ನೂ ಓದಿ: ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ, ಇಡೀ ಬಿಜೆಪಿ ಹೊಣೆ: ತಿಮರೋಡಿ ಫಸ್ಟ್ ರಿಯಾಕ್ಷನ್

ತಿಮರೋಡಿಯ ಉಜಿರೆ ನಿವಾಸದಲ್ಲಿ ಹೈಡ್ರಾಮಾ
ಇನ್ನೂ ಬೆಳಗ್ಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆಯ 30ಕ್ಕೂ ಹೆಚ್ಚು ಪೊಲೀಸರು 8ಕ್ಕೂ ಹೆಚ್ಚು ವಾಹನಗಳಲ್ಲಿ ಭಾರೀ ಬಂದೋಬಸ್ತ್‌ನಿಂದ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ತೆರಳಿದ್ರು. ಪೊಲೀಸರು ತೆರಳಿದ್ದ ವೇಳೆ ಮಹೇಶ್ ಶೆಟ್ಟಿ ಹಾಗೂ ಅವರ ಆಪ್ತ ಬಳಗ ಉಜಿರೆಯ ನಿವಾಸದಲ್ಲೇ ಇದ್ದರು. ತಿಮರೋಡಿಯನ್ನು ವಶಕ್ಕೆ ಪಡೆಯಲು ಪೊಲೀಸ್ರು ಮುಂದಾದಾಗ ಮತ್ತೊಬ್ಬ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವು ಬೆಂಬಲಿಗರು ವಿರೋಧಿಸಿದ್ರು. ತಿಮರೋಡಿಯನ್ನು ವಶಕ್ಕೆ ಪಡೆಯೋದು ಸರಿಯಲ್ಲ. ಯಾವ ಕಾರಣಕ್ಕೆ ವಶಕ್ಕೆ ಪಡೆಯುತ್ತಿದ್ದೀರಿ. ಅರೆಸ್ಟ್ ವಾರೆಂಟ್ ತೋರಿಸಿ.. ನಾವು ಠಾಣೆಗೆ ಬಂದಿಲ್ಲ ಅಂದಾಗ ಕ್ರಮ ಕೈಗೊಳ್ಳಿ ಎಂದು ವಾದಿಸಿದ್ರು.
ಮನೆಯ ಆವರಣದಲ್ಲಿ ಪೊಲೀಸರು ಹಾಗೂ ಬೆಂಬಲಿಗರ ನಡುವೆ ವಾಗ್ವಾದ ಜೋರಾಗ್ತಿದ್ರೆ, ಇತ್ತ ಮನೆಯ ಕೋಣೆಯನ್ನು ಲಾಕ್ ಮಾಡಿ ತಿಮರೋಡಿ ಕೂತಿದ್ರು. ತಿಮರೋಡಿಯನ್ನು ತಮ್ಮ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಅವ್ರ ವಕೀಲರು, ಬೆಂಬಲಿಗರು ಪೊಲೀಸರಿಗೆ ಕ್ಲಾರಿಟಿ ಕೊಡಿ ಎಂದು ಒತ್ತಾಯಿಸಿದ್ರು. ಇದಕ್ಕೆ ಪೊಲೀಸರು, ತಿಮರೋಡಿಯವ್ರೇ ಹೊರ ಬರಲಿ ಎಂದು ಹೇಳಿದ್ದಾರೆ. ಹೀಗಾಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್, ತಿಮರೋಡಿ, ಸಮೀರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು
ತಮ್ಮ ಕಾರಿನಲ್ಲೇ ಠಾಣೆಗೆ ತೆರಳಿದ ತಿಮರೋಡಿ
ವಾಗ್ದಾದ, ಕೆಲಕಾಲ ಉದ್ವಿಗ್ನ ವಾತಾವರಣ ಬಳಿಕ ಭಾರೀ ಹೈಡ್ರಾಮಾ ಸೃಷ್ಟಿಯಾದರೂ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಬಂಧಿಸಿದ್ರು. ಆದರೆ ಪೊಲೀಸ್ ವಾಹನದಲ್ಲಿ ಬರುವುದಿಲ್ಲ ಎಂದು ತಿಮರೋಡಿ ನಿರಾಕರಿಸಿದ್ದಾರೆ. ನಂತರ ಅವರೇ ಬರುವುದಾಗಿ ಹೇಳಿದ್ದಾರೆ. ಹೀಗಾಗಿ ಪೊಲೀಸರ ಸುಪರ್ಧಿಯಲ್ಲೇ ತಿಮರೋಡಿ ಖಾಸಗಿ ವಾಹನದಲ್ಲೇ ತೆರಳಿದ್ರು. ಇದೇ ವಾಹನದಲ್ಲಿ ಮತ್ತೊಬ್ಬ ದೂರುದಾರ ಜಯಂತ್, ಗಿರೀಶ್ ಮಟ್ಟಣ್ಣನವರ್ ಸಹ ತೆರಳಿದ್ರು.
ಅತ್ಯಾಚಾರಿಗಳ ಬಂಧನಕ್ಕೆ ಆಗ್ರಹ
ಇನ್ನು ಮನೆಯಿಂದ ಪೊಲೀಸರು ಕರೆದೊಯ್ಯುತ್ತಿದ್ದಾಗ ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಳು ಕೇಸ್ ಮಾಡಿ ವಶಕ್ಕೆ ಪಡೆದಿದ್ದಾರೆ. ಬಿಜೆಪಿಯವರ ಸುಳ್ಳು ದಾಖಲೆ. ಬಿಜೆಪಿಯವರ ಪಾಪದ ಕೂಸು, ಸೌಜನ್ಯಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರಿಗಳ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಎಲ್ ಸಂತೋಷ್ ವಿರುದ್ಧ ಅವಹೇಳನ – ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ
