ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ – ಸಿಡಿದ ಧರ್ಮಸ್ಥಳದ ಭಕ್ತರು

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ (Dharmasthala) ಕ್ಷೇತ್ರಕ್ಕೆ ನಿರಂತರ ಅವಮಾನ ಮಾಡುತ್ತಿರುವುದನ್ನು ಖಂಡಿಸಿ ಕ್ಷೇತ್ರದ ಭಕ್ತರು ಸಿಡಿದೆದ್ದಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳದ ಗ್ರಾಮಸ್ಥರು ಧರ್ಮಸ್ಥಳ ಠಾಣೆಗೆ ಮುತ್ತಿಗೆ ಹಾಕಿ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಕ್ಷೇತ್ರ ಬಗ್ಗೆ ಅಪಪ್ರಚಾರ ನಡೆಸಿದ್ದಕ್ಕೆ ಪಾಂಗಳ ಎಂಬಲ್ಲಿ ಮೂವರು ಯೂಟ್ಯೂಬರ್‌ ಮೇಲೆ  ಹಲ್ಲೆ ನಡೆಸಿದ್ದಾರೆ. ಎರಡು ಗುಂಪುಗಳ ಮಧ್ಯೆ ಕಿತ್ತಾಟ ನಡೆಯುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಗ್ರಾಮಸ್ಥರು ಪ್ರತಿಭಟನೆ ಮುಂದಾಗಿದ್ದು ಯಾಕೆ?
ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದರು. ಈ ಮಧ್ಯೆ ಯಾವಾಗ ಸಾಕ್ಷಿಧಾರ ತೋರಿಸಿದ 6ನೇ ಜಾಗದಲ್ಲಿ ಅಸ್ಥಿ ಸಿಕ್ಕಿತೋ ಆ ನಂತರ ಈ ಅಸ್ಥಿಯ ಬಗ್ಗೆ ಕೆಲ ಯೂಟ್ಯೂಬ್‌ ವಾಹಿನಿಗಳು ಸುಳ್ಳು ಸುದ್ದಿಗಳನ್ನು ಪ್ರಚಾರ ನಡೆಸಲು ಆರಂಭಿಸಿದವು.

5-6 ವ್ಯಕ್ತಿಗಳ ದೇಹ ಸಿಕ್ಕಿವೆ. ಮಹಿಳೆಯರ ಮೂಳೆಗಳು ಸಿಕ್ಕಿವೆ ಎಂದು ಅಪ್ರಚಾರ ನಡೆಸಲು ಆರಂಭಿಸಿದವು. ಸೋಮವಾರ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೂಳೆಗಳು ಪತ್ತೆಯಾಗಿದ್ದವು. ಇದು ಬೆಳಕಿಗೆ ಬರುತ್ತಿದ್ದಂತೆ ಧರ್ಮಸ್ಥಳ ಗ್ರಾಮಸ್ಥರೇ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಕೆಲ ಯೂಟ್ಯೂಬರ್‌ಗಳು ಸುದ್ದಿ ಮಾಡಿದ್ದರು. ತಮ್ಮ ಎಲ್ಲಾ ಸುದ್ದಿಗಳಿಗೆ ಎಸ್‌ಐಟಿ ಖಚಿತ ಮೂಲಗಳು ತಿಳಿಸುತ್ತಿದ್ದರು.

ರಾಜ್ಯಮಟ್ಟದ ಮಾಧ್ಯಮಗಳಲ್ಲಿ ತನಿಖೆಗೆ ಸಂಬಂಧಿಸಿದ ಸುದ್ದಿಗಳು ಮಾತ್ರ ಬರುತ್ತಿದ್ದರೆ ಯೂಟ್ಯೂಬ್‌ ವಾಹಿನಿಗಳಲ್ಲಿ ಅದಕ್ಕೆ ವಿರುದ್ಧವಾದ ಸುದ್ದಿಗಳು ಪ್ರಕಟವಾಗುತ್ತಿದ್ದವು. ಅಷ್ಟೇ ಅಲ್ಲದೇ ಕ್ಷೇತ್ರದ ಬಗ್ಗೆ ಅವಹೇಳನ ಮಾಡಿ ಸುದ್ದಿ ಪ್ರಕಟವಾಗುತ್ತಿತ್ತು. ಇದು ಗೊಂದಲಕ್ಕೆ ಕಾರಣವಾಗುತ್ತಿದ್ದವು. ನಿರಂತರ ದೇವಸ್ಥಾನ, ವೀರೇಂದ್ರ ಹೆಗಡೆ ಕುಟುಂಬದ ತೇಜೋವಧೆ, ಗ್ರಾಮಸ್ಥರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಇಂದು ಭಕ್ತರು ಸಿಡಿದು ನಿಂತಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?

ಗ್ರಾಮಸ್ಥರ ಆಗ್ರಹ ಏನು?
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕಳೆದ 13 ವರ್ಷಗಳಿಂದ ಅಪಪ್ರಚಾರ ನಡೆಯುತ್ತಿದೆ. ಈ ಅಪಪ್ರಚಾರಕ್ಕೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣನವರ್‌ ಕಾರಣ. ಇವರನ್ನು ಕೂಡಲೇ ಬಂಧಿಸಬೇಕು. ಸಮೀರ್‌ ಎಂಬಾತ ಯಾವುದೇ ಸಾಕ್ಷ್ಯ ಇಲ್ಲದೇ ಸುಳ್ಳು ವಿಡಿಯೋ ಮಾಡಿದ್ದಾನೆ. ಆತನ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ.

ಈಗ 12 ಸ್ಥಳಗಲ್ಲಿ ಶೋಧ ನಡೆಸಿದರೂ ಸರಿಯಾದ ಸಾಕ್ಷ್ಯ ಸಿಗಲಿಲ್ಲ. ಈ ಸಂದರ್ಭಲ್ಲಿ ಗಿರೀಶ್‌ ಮಟ್ಟಣನವರ್‌ ಪೊಲೀಸರ ವಿರುದ್ಧವೇ ಮಾತನಾಡುತ್ತಿದ್ದಾರೆ. ಹೀಗಾಗಿ ಇವರ ಜೊತೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಯೂಟ್ಯೂಬರ್ಸ್‌ ವಿರುದ್ಧ ಕ್ರಮಕೈಗೊಳ್ಳಬೇಕು. ದಕ್ಷಿಣ ಕನ್ನಡ ಎಸ್‌ಪಿ, ಎಸ್‌ಐಟಿ ತಂಡ ಬರುವವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಕ್ಷೇತ್ರದ ಭಕ್ತರು ಈಗ ಧರ್ಮಸ್ಥಳ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.