ಗಂಗೆ ನಿಮ್ಮ ಪಾದವನ್ನು ಸ್ಪರ್ಶಿಸುತ್ತಿದ್ದಾಳೆ, ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತೆ – ಯುಪಿ ಸಚಿವ ವಿವಾದಾತ್ಮಕ ಹೇಳಿಕೆ

-ನಮ್ಮ ಜೊತೆ ಇಲ್ಲೇ ಇದ್ದು ಗಂಗೆಯ ಆಶೀರ್ವಾದ ಪಡೆಯಿರಿ ಎಂದು ಸಚಿವರಿಗೆ ಹೇಳಿದ ವೃದ್ಧ ಮಹಿಳೆ

ಲಕ್ನೋ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಗಂಗಾ ನದಿಯುದ್ದಕ್ಕೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಪ್ರವಾಹ ಪೀಡಿತ ಕಾನ್ಪುರದ ದೇಹತ್ ಪ್ರದೇಶಕ್ಕೆ ರಾಜ್ಯ ಕ್ಯಾಬಿನೆಟ್ ಸಚಿವ ಸಂಜಯ್ ನಿಶಾದ್ (Sanjay Nishad) ಅವರು ಪರಿಶೀಲನೆಗಾಗಿ ತೆರಳಿದ್ದರು. ಈ ವೇಳೆ ವಿವಾದಾತ್ಮಕ ಹೇಳಿಕೆಯೊಂದು ನೀಡಿ ಟೀಕೆಗೆ ಗುರಿಯಾಗಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುವ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಜವಾಬ್ದಾರಿಯನ್ನು ನಿಶಾದ್ ಅವರಿಗೆ ವಹಿಸಲಾಗಿತ್ತು. ಈ ಹಿನ್ನೆಲೆ ಸಚಿವ ಸಂಜಯ್ ನಿಶಾದ್ ಅವರು ಕಾನ್ಪುರ ದೇಹತ್‌ನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಸಂಕಷ್ಟವನ್ನು ಸಚಿವರ ಮುಂದೆ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ಡಿಕೆಶಿ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು: ಇಕ್ಬಾಲ್ ಹುಸೇನ್

ಈ ವೇಳೆ ಸಚಿವರು ಮಾತನಾಡಿ, ನೀವು ಗಂಗೆಯ ಮಕ್ಕಳು, ಗಂಗಾ ನದಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತದೆ ಎಂದು ಪ್ರವಾಹ ಪೀಡಿತ ಗ್ರಾಮಸ್ಥರಿಗೆ ಹೇಳಿದ್ದಾರೆ. ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ವೇಳೆ ತಂಡದಲ್ಲಿದ್ದ ಓರ್ವ ಮಹಿಳೆ ಸಚಿವರ ಹೇಳಿಕೆಗಳನ್ನು ವೃದ್ಧ ಮಹಿಳೆಗೆ ವಿವರಿಸಲು ಪ್ರಯತ್ನಿಸಿದರು. ಈ ವೇಳೆ ಆ ವೃದ್ಧ ಮಹಿಳೆ, ನಮ್ಮ ಜೊತೆ ಇಲ್ಲೇ ಇದ್ದು ಗಂಗಾ ನದಿಯ ಆಶೀರ್ವಾದವನ್ನು ನೀವು ಕೂಡ ಪಡೆದುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ಸಚಿವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಪ್ರವಾಹ ಒಂದು ನೈಸರ್ಗಿಕ ವಿಕೋಪ ಮತ್ತು ಸರ್ಕಾರ ಜನರಿಗೆ ತನ್ನಿಂದ ಸಾಧ್ಯವಿರುವ ಎಲ್ಲ ಸಹಾಯವನ್ನೂ ಮಾಡುತ್ತಿದೆ. ನಾವು ಅವರಿಗೆ ಆಹಾರ ಪೊಟ್ಟಣಗಳನ್ನು, ಬೇಯಿಸಿದ ಆಹಾರವನ್ನು ನೀಡುತ್ತಿದ್ದೇವೆ. ನಾವು ಅವರಿಗೆ ಧೈರ್ಯವನ್ನು ನೀಡಬೇಕು. ಅದಕ್ಕಾಗಿ ನಾನು ಅವರಿಗೆ ಆ ಮಾತುಗಳನ್ನು ಹೇಳಿದೆ. ನಾವು ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಇದು ಒಂದು ದಿನ ಅಥವಾ ಒಂದು ವರ್ಷದ ಸಮಸ್ಯೆಯಲ್ಲ. ನಾನು ಅವರಿಗೆ ಭಾವನಾತ್ಮಕ ಬೆಂಬಲವನ್ನು ನೀಡಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ವಿಜಯಪುರ | ನಿರಂತರ ಮಳೆಗೆ ಸರ್ಕಾರಿ ಶಾಲೆ ಜಲಾವೃತ – ವಿದ್ಯಾರ್ಥಿಗಳ ಪರದಾಟ