ಆನೇಕಲ್ | ಬಾಲಕ ನಿಶ್ಚಿತ್ ಬರ್ಬರ ಹತ್ಯೆ; ಆರೋಪಿಗಳ ಕಾಲಿಗೆ ಗುಂಡೇಟು, ಇಬ್ಬರು ಅರೆಸ್ಟ್

– ಕೊಲೆ ಬಳಿಕ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ
– ತಾನು ಕೆಲಸ ಮಾಡ್ತಿದ್ದ ಮನೆಯಲ್ಲಿದ್ದ ಬಾಲಕನನ್ನೇ ಕಿಡ್ನ್ಯಾಪ್‌

ಬೆಂಗಳೂರು: ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸರು (Bannerughatta) ಇಬ್ಬರನ್ನು ಬಂಧಿಸಿದ್ದಾರೆ.

ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಬಂಧಿತ ಆರೋಪಿಗಳು. ಬುಧವಾರ ರಾತ್ರಿ ಅರಕೆರೆ ಶಾಂತಿನಿಕೇತನ ಬಡಾವಣೆ ಬಳಿ ಟ್ಯೂಷನ್‌ನಿಂದ ಬರುತ್ತಿದ್ದ 13 ವರ್ಷದ ನಿಶ್ಚಿತ್‌ನನ್ನು ದುಷ್ಕರ್ಮಿಗಳು ಅಪಹರಿಸಿದ್ದರು.ಇದನ್ನೂ ಓದಿ: ಬೆಂಗಳೂರಿಗರಿಗೆ ಮತ್ತೊಂದು ಶಾಕ್ – ಇಂದಿನಿಂದ ಆಟೋ ದರ ಏರಿಕೆ

ಬಾಲಕನ ತಂದೆ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ಹೀಗಾಗಿ ಕಿಡ್ನ್ಯಾಪರ್ಸ್ ಕರೆ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕಿಡ್ನ್ಯಾಪರ್ಸ್ ಕಡೆಯಿಂದ ಫೋನ್ ಬರ್ತಿದ್ದಂತೆ ಬಾಲಕ ಪೋಷಕರು ಹುಳಿಮಾವು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿಡ್ನ್ಯಾಪರ್ಸ್‌ಗಳ ಲೊಕೇಶನ್ ಟ್ರೇಸ್ ಮಾಡಿ ಹುಡುಕಾಟ ನಡೆಸಿದ್ದರು. ಮತ್ತೊಂದೆಡೆ ಪೋಷಕರು 5 ಲಕ್ಷ ಹಣವನ್ನು ಕೈಯಲ್ಲಿಡಿದು ಕಾದು ಕುಳಿತ್ತಿದ್ದರು. ಆದರೆ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬಾಲಕನ ಮೃತದೇಹ ಸುಟ್ಟ ರೀತಿಯಲ್ಲಿ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹಾಗೂ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

ಕೃತ್ಯ ನಡೆದ ಸ್ವಲ್ಪ ದೂರದಲ್ಲಿಯೇ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ಲಾಂಗ್‌ನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಸಬ್‌ಇನ್ಸ್‌ಪೆಕ್ಟರ್‌ ಅರವಿಂದ್ ಗಾಯಗೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಜಯನಗರ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಗುರುಮೂರ್ತಿ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಅದೇ ಮನೆಯಲ್ಲಿದ್ದ ಬಾಲಕನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇನ್ನೂ ಇದಕ್ಕೂ ಮುನ್ನ ಆರೋಪಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿಕೊಂಡಿದ್ದ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್‌