ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ಮಕ್ಕಳು ಸೇರಿದಂತೆ 10 ಮಂದಿಗೆ ಗಾಯ!

ಬೆಂಗಳೂರು: ಗ್ರಾಮದೇವತೆ ಮಾರಮ್ಮ ದೇವಿ ಜಾತ್ರೆಯಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದು, ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯವಾಗಿರೋ ಘಟನೆ ನೆಲಮಂಗಲ ತಾಲೂಕಿನ ನರಸೀಪುರ ಗ್ರಾಮದಲ್ಲಿ ಸಂಭವಿಸಿದೆ.

ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾರಮ್ಮ ದೇವಿಗೆ ಸಡಗರ ಸಂಭ್ರಮದಿಂದ ಗ್ರಾಮಸ್ಥರು ಬೆಂಕಿಯ ಕೊಂಡವನ್ನ ಏರ್ಪಡಿಸಿದ್ದು, ಈ ವೇಳೆ ಆರತಿ ದೀಪದೊಂದಿಗೆ ಸೇವೆ ಸಲ್ಲಿಸುವಾಗ ಆಯತಪ್ಪಿ ಅವಘಡ ನಡೆದಿದೆ.

ಇದನ್ನೂ ಓದಿ: ವಿಡಿಯೋ: ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ದೇವರ ಪಲ್ಲಕ್ಕಿ ಹೊತ್ತ ಭಕ್ತ

ಗಾಯಗೊಂಡ ಸುಜಾತ, ಕವಿತಾ, ಲಕ್ಷ್ಮೀ, ಪವಿತ್ರ, ಜನಾರ್ದನ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಇದರಿಂದ ಗ್ರಾಮದಲ್ಲಿ ಆತಂಕದ ಛಾಯೆ ನಿರ್ಮಾಣವಾಗಿದ್ದು, ಡಾಬಸ್‍ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಅಡ್ಡಿ ಪಡಿಸಿದ್ದು, ಇಲ್ಲಿ ಯಾವುದೇ ಅವಘಡ ನಡೆದಿಲ್ಲ. ಎಲ್ಲ ಸೃಷ್ಟಿ ಎಂದು ಸ್ಥಳೀಯರು ಸಮಜಾಯಿಷಿ ಹೇಳಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *