ಗುಜರಾತ್ ಉಪಮುಖ್ಯಮಂತ್ರಿ ಪುತ್ರನನ್ನ ವಿಮಾನ ಏರದಂತೆ ತಡೆದ ಅಧಿಕಾರಿಗಳು

ಅಹಮದಾಬಾದ್: ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಪುತ್ರನನ್ನ ಕತಾರ್ ಏರ್‍ವೇಸ್ ವಿಮಾನ ಏರದಂತೆ ಅಧಿಕಾರಿಗಳು ತಡೆದ ಘಟನೆ ಸೋಮವಾರದಂದು ನಡೆದಿದೆ.

ನಿತಿನ್ ಪಟೇಲ್ ಅವರ ಪುತ್ರ ಜೈಮನ್ ಪಟೇಲ್ ತಮ್ಮ ಹೆಂಡತಿ ಮಗಳೊಂದಿಗೆ ಗ್ರೀಸ್‍ಗೆ ಪ್ರವಾಸಕ್ಕೆಂದು ಹೊರಟಿದ್ದರು. ಸೋಮವಾರ ಬೆಳಿಗ್ಗೆ 4 ಗಂಟೆಗೆ ವಿಮಾನ ಹೊರಡಬೇಕಿತ್ತು. ಈ ಹಿನ್ನೆಲೆಯಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿದ್ದ ಜೈಮನ್ ಪಟೇಲ್ ಪಾನಮತ್ತರಾಗಿದ್ದು, ನಡೆಯುವುದಕ್ಕೂ ಕಷ್ಟಪಡುತ್ತಿದ್ರು ಎಂದು ವರದಿಯಾಗಿದೆ.

ಇಂತಹ ಸ್ಥಿತಿಯಲ್ಲಿದ್ದ ಜೈಮನ್, ವಿಮಾನ ನಿಲ್ದಾಣದಲ್ಲಿ ವೀಲ್‍ಚೇರ್‍ನಲ್ಲಿ ಕುಳಿತೇ ತಪಾಸಣೆ ಮುಗಿಸಿದ್ದಾಗಿ ವಿಮಾನ ನಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಜೈಮನ್ ಅವರನ್ನ ವಿಮಾನ ಏರದಂತೆ ತಡೆಯಲಾಯ್ತು. ಜೈಮನ್ ಮತ್ತು ಏರ್‍ವೇಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ನಿತಿನ್ ಪಟೇಲ್, ನನಗೆ ಅವಮಾನ ಮಾಡಲೆಂದು ಈ ರೀತಿ ಮಾಡಿದ್ದಾರೆ. ನನ್ನ ಮಗ, ಸೊಸೆ ಮತ್ತು ಮೊಮ್ಮಗಳು ಪ್ರವಾಸಕ್ಕೆ ಹೋಗುತ್ತಿದ್ರು. ಮಗನ ಆರೋಗ್ಯ ಚೆನ್ನಾಗಿರಲಿಲ್ಲ. ನಂತರ ನನ್ನ ಸೊಸೆ ಮನೆಗೆ ಫೋನ್ ಮಾಡಿ, ಪ್ರವಾಸಕ್ಕೆ ಹೋಗದೆ ಮನೆಗೆ ಹಿಂದಿರುಗಿದ್ರು. ನಮ್ಮ ವಿರೋಧಿಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *