10 ಅಡಿ ಆಳದಲ್ಲಿ ಸೊಸೆಯನ್ನು ಹೂತಿದ್ದ ಪಾಪಿಗಳು – ಓಡಿ ಹೋಗಿದ್ದಾಳೆ ಎಂದು ಕತೆ ಕಟ್ಟಿದ್ದ ಪತಿ ಕುಟುಂಬಸ್ಥರು ಅರೆಸ್ಟ್‌!

–  ಗುಂಡಿಯಲ್ಲಿ ಹೂತು ಕಾಂಕ್ರೀಟ್‌ ಹಾಕಿದ್ದ ರಾಕ್ಷಸರು
– ಎರಡು ತಿಂಗಳ ಬಳಿಕ ಪತ್ತೆಯಾದ ಶವ

ಚಂಡೀಗಢ: ಮನೆಯ ಪಕ್ಕದಲ್ಲೇ 10 ಅಡಿ ಆಳದ ಗುಂಡಿ ತೆಗೆದು ಮಹಿಳೆಯನ್ನು ಹೂತು ಹಾಕಿದ ಘಟನೆ ಹರಿಯಾಣದ (Haryana) ಫರಿದಾಬಾದ್‌ನಲ್ಲಿ (Faridabad) ನಡೆದಿದೆ. ಮಹಿಳೆಯ ಕೊಳೆತ ಶವ ಪತ್ತೆಯಾಗಿದ್ದು, ಮೃತ ಮಹಿಳೆಯನ್ನು ಉತ್ತರ ಪ್ರದೇಶದ ಶಿಕೋಹಾಬಾದ್ ನಿವಾಸಿ ತನು (24) ಎಂದು ಗುರುತಿಸಲಾಗಿದೆ.

ತನು ಫರಿದಾಬಾದ್‌ನ ರೋಶನ್ ನಗರದ ನಿವಾಸಿ ಅರುಣ್‌ನನ್ನು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಇತ್ತೀಚೆಗೆ ಆಕೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಎಂದು ಆಕೆಯ ಪತಿ ಕುಂಟುಂಬಸ್ಥರು ಕತೆ ಕಟ್ಟಿದ್ದರು. ಆದರೆ ಮನೆಯ ಪಕ್ಕದಲ್ಲೇ ಆಕೆಯ ಶವ ಪತ್ತೆಯಾಗಿದೆ.  ಮನೆಯ ಪಕ್ಕದಲ್ಲಿ ಸುಮಾರು 10 ಅಡಿ ಗುಂಡಿ ತೆಗೆದು ಆಕೆಯ ಶವವನ್ನು ಹೂತು ಹಾಕಿ ಮೇಲೆ ಕಾಂಕ್ರೀಟ್‌ ಹಾಕಲಾಗಿತ್ತು. ಮಹಿಳೆಯ ಶವವನ್ನು ಜೆಸಿಬಿ ಬಳಸಿ ತೆಗೆಯಲಾಗಿದೆ. ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದು ಹೀನ ಕೃತ್ಯ – ಜಮೀನಿನಲ್ಲೇ ನರಳಿ ಪ್ರಾಣ ಬಿಟ್ಟ ಹಸು

ತ್ಯಾಜ್ಯ ನೀರು ಹರಿಯಲು ಚರಂಡಿ ನಿರ್ಮಾಣಕ್ಕಾಗಿ ಸುಮಾರು ಎರಡು ತಿಂಗಳ ಹಿಂದೆ ಈ ಜಾಗವನ್ನು ಅಗೆಯಲಾಗಿತ್ತು. ಚರಂಡಿಗೆ ಕೊಳಚೆ ನೀರು ಸರಿಯಾಗಿ ಹೊಗುತ್ತಿಲ್ಲ ಎಂದು ಮಹಿಳೆಯ ಮಾವ ಅಲ್ಲಿ ಗುಂಡಿ ತೆಗೆಸಿದ್ದರು. ಬಳಿಕ ಆತುರಾತುರವಾಗಿ ಮುಚ್ಚಿ, ಕಾಂಕ್ರೀಟ್‌ ಹಾಕಿದ್ದರು. ಇದಾದ ಬಳಿಕ ತನು ಎಲ್ಲೂ ಕಾಣಿಸಿರಲಿಲ್ಲ. ನಮಗೆ ಏನೋ ಯಡವಟ್ಟಾಗಿದೆ ಎನಿಸುತ್ತಿತ್ತು. ಆದರೆ ಈ ರೀತಿ ಆಗಿದೆ ಎಂಬುದನ್ನು ಊಹಿಸಿರಲಿಲ್ಲ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

2023 ರಲ್ಲಿ ತನು ಮದುವೆಯಾದ ನಂತರ ವರದಕ್ಷಿಣೆಗಾಗಿ (Dowry) ಪತಿ ಕುಟುಂಬದವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ನಮ್ಮ ಕುಟುಂಬವು ಸಾಧ್ಯವಾದಷ್ಟು ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಿತ್ತು. ಆದರೆ ಪದೇ ಪದೇ ಒತ್ತಡ ಹೇರಲಾಗುತ್ತಿತ್ತು. ಇದರಿಂದ ಆಕೆ ಬೇಸತ್ತು ತವರು ಮನೆಗೆ ಬಂದು ಒಂದು ವರ್ಷಕ್ಕೂ ಹೆಚ್ಚು ಕಾಲ ಇದ್ದಳು. ಬಳಿಕ ಆಕೆಯನ್ನು ಪತಿ ಮನೆಗೆ ಕಳುಹಿಸಲಾಗಿತ್ತು. ಇದಾದ ಬಳಿಕ ಆಕೆಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು. ಆಕೆಗೆ ಫೋನ್‌ ಸಹ ಮಾಡಲು ಬಿಡುತ್ತಿರಲಿಲ್ಲ ಎಂದು ಮೃತ ಮಹಿಳೆಯ ಸಹೋದರಿ ಪ್ರೀತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಏಪ್ರಿಲ್ 23 ರಂದು, ತನು ಮನೆಯಿಂದ ಓಡಿಹೋಗಿದ್ದಾಳೆಂದು ಅತ್ತೆ-ಮಾವಂದಿರು ನಮ್ಮ ಕುಟುಂಬಕ್ಕೆ ತಿಳಿಸಿದ್ದರು. ನಮ್ಮ ಕುಟುಂಬ ಪೊಲೀಸರನ್ನು ಸಂಪರ್ಕಿಸಿದರೂ, ವಾರಗಳವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಸಂಬಂಧ ಪೊಲೀಸರು ಮಹಿಳೆಯ ಪತಿ, ಮಾವ, ಅತ್ತೆ ಮತ್ತು ಸಂಬಂಧಿಯೊಬ್ಬನನ್ನು ಬಂಧಿಸಿದ್ದಾರೆ. ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿಯಲು ಶವವನ್ನು ಪೊಲೀಸರು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಇದನ್ನೂ ಓದಿ: ಮಗನಿಗೆ ನಿಶ್ಚಯವಾಗಿದ್ದ ಹೆಣ್ಣಿನ ಜೊತೆ 6 ಮಕ್ಕಳ ತಂದೆ ಚಕ್ಕಂದ – ಮದುವೆ ಬೇಡ ಎಂದಿದ್ದಕ್ಕೆ ಪತ್ನಿ ಮೇಲೆ ಹಲ್ಲೆ