ವಿಮಾನ ಪತನ – ಗಗನಸಖಿಯ ಫೋಟೋ ಹಿಡಿದು ಕಣ್ಣೀರಿಟ್ಟ ಕುಟುಂಬಸ್ಥರು

ನವದೆಹಲಿ: ಏರ್‌ ಇಂಡಿಯಾ (Air India) ವಿಮಾನ ದುರಂತದ (Plane Crash) ಸುದ್ದಿ ತಿಳಿದು ಗಗನಸಖಿಯೊಬ್ಬರ ಕುಟುಂಬಸ್ಥರು ಆಕೆಯ ಫೋಟೋ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾರೆ.

ಮಣಿಪುರದ ತೌಬಲ್ ಜಿಲ್ಲೆಯ ಅವಾಂಗ್ ಲೈಕೈಯ ನಗಂಥೋಯ್ ಶರ್ಮಾ ಕೊಂಗ್ಬ್ರೈಲಾತ್ಪಮ್ (22) ಅಹಮದಾಬಾದ್‌ನಿಂದ (Ahmedabad) ಲಂಡನ್‌ಗೆ ತೆರಳುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದರು. ಕುಟುಂಬದೊಂದಿಗೆ ಈ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ವಿಮಾನ ಪತನಗೊಂಡ ಸುದ್ದಿ ಬಂದಿದೆ. ಇದರಿಂದ ಗಾಬರಿಗೊಂಡ ಕುಟುಂಬದ ಸದಸ್ಯರು ಆಲ್ಬಮ್‌ನಲ್ಲಿದ್ದ ಆಕೆಯ ಫೋಟೋಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ತಮ್ಮ ಫೇವರೇಟ್‌ ನಂಬರ್‌ ದಿನವೇ ಮೃತಪಟ್ಟ ಗುಜರಾತ್‌ ಮಾಜಿ ಸಿಎಂ ರೂಪಾನಿ

ನಗಂಥೋಯ್ ಶರ್ಮಾ ಅವರ ತಾಯಿ, ʻನನ್ನ ಮಗು, ನಾನು ನಿನ್ನನ್ನು ನೋಡಬೇಕು. ನೀನು ಎಲ್ಲಿದ್ದೀಯಾ?ʼ ಎಂದು ಜೋರಾಗಿ ಅಳುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಬಗ್ಗೆ ನಗಂಥೋಯ್ ಸಹೋದರಿ ಗೀತಾಂಜಲಿ ಮಾಧ್ಯಮಗಳ ಜೊತೆ ಮಾತನಾಡಿ, 2023 ರಲ್ಲಿ ಏರ್ ಇಂಡಿಯಾದಲ್ಲಿ ಗಗನಸಖಿ ಆಗಿ ಆಕೆ ಕೆಲಸಕ್ಕೆ ಸೇರಿದ್ದಳು. ನಾವು ಮೂವರು ಸಹೋದರಿಯರು. ಗಗನಸಖಿ ಆಗುವುದು ಅವಳ ಕನಸಾಗಿತ್ತು. ಇಂಟರ್ನೆಟ್ ನಿಷೇಧದಿಂದಾಗಿ, ನಾವು ಎಂದಿನಂತೆ ವೀಡಿಯೊ ಕಾಲ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾನು ಶಾಲೆಯಲ್ಲಿದ್ದಾಗ, ಇಂದು ಲಂಡನ್‌ಗೆ ಹೋಗುತ್ತಿದ್ದೇನೆ. ಜೂನ್ 15 ರಂದು ಹಿಂತಿರುತ್ತೇನೆ ಎಂದು ಸಂದೇಶ ಕಳಿಸಿದ್ದಳು. ನಾನು ಆಕೆಗೆ ಶುಭ ಹಾರೈಸಿ, ಇಂಟರ್ನೆಟ್ ಸೇವೆ ಪುನರಾರಂಭವಾದ ನಂತರ ಸಂಪರ್ಕಿಸುತ್ತೇವೆ ಎಂದು ಹೇಳಿದೆ. ನಂತರ ಚಿಕ್ಕಮ್ಮ ವಿಚಾರಿಸಲು ಕರೆ ಮಾಡಿದಾಗ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿಯಿತು ಎಂದು ಹೇಳಿಕೊಂಡಿದ್ದಾರೆ.

ನಗಂಥೋಯ್ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿರುವುದಾಗಿ ಹೇಳಿದ್ದಳು. ಆದಾಗ್ಯೂ, ಅವಳ ಫೋನ್ ಇನ್ನೂ ರಿಂಗ್‌ ಆಗುತ್ತಿದೆ. ಅವಳ ಸೋಶಿಯಲ್‌ ಮೀಡಿಯಾ ಖಾತೆಗಳು ಆನ್‌ಲೈನ್‌ನಲ್ಲಿ ಸಕ್ರಿಯವಾಗಿವೆ. ಈ ಬಗ್ಗೆ ನಾವು ವಿಮಾನಯಾನ ಸಂಸ್ಥೆಯ ಅಧಿಕಾರಿಗಳ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಅಪಘಾತಗೊಂಡ ಈ ವಿಮಾನದಲ್ಲಿ ಸುಮಾರು 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಮೂಲಗಳ ಪ್ರಕಾರ 200ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಮೃತ ಪ್ರಯಾಣಿಕರ ಕುಟುಂಬಕ್ಕೆ 1 ಕೋಟಿ ಪರಿಹಾರ: ಟಾಟಾ ಗ್ರೂಪ್‌ ಘೋಷಣೆ