ಕಾಲ್ತುಳಿತ ಕೇಸ್‌ | ಸಿಎಂ ಕೊಟ್ಟ ಸುಳಿವಿನಿಂದ ಪ್ರಮುಖ ಆರೋಪಿಗಳು ಪರಾರಿ

ಬೆಂಗಳೂರು: ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaih) ನೀಡಿದ ಸುಳಿವಿನಿಂದ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ (Chinnaswamy Stadium Stampede Case) ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ.

ಹೌದು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (KSCA) ಮತ್ತು ಕಾರ್ಯಕ್ರಮ ನಿರ್ವಹಣೆ ಮಾಡಿದ್ದ ಡಿಎನ್‌ಎ ಮೇಲೆ ಎಫ್‌ಐಆರ್‌ (FIR) ದಾಖಲಾಗಿದೆ. ಎಫ್‌ಐಆರ್‌ ದಾಖಲಾದ ನಂತರ ಈ ಮೂರು ಸಂಸ್ಥೆಗಳ ಪ್ರಮುಖರನ್ನು ಬಂಧಿಸಬೇಕಿತ್ತು. ಆದರೆ ಪೊಲೀಸರ ಬಂಧನಕ್ಕೂ ಮೊದಲೇ ಈ ಸಂಸ್ಥೆಗಳ ಪ್ರಮುಖರು ಪರಾರಿಯಾಗಿದ್ದಾರೆ.

ಸಿಎಂ ಹೇಳಿದ್ದೇನು?
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಿರ್ಲಕ್ಷ್ಯ ವಹಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಆಗಲಿದೆ. ಮೂರು ಸಂಸ್ಥೆಗಳ ಮುಖ್ಯಸ್ಥರನ್ನು ಬಂಧಿಸುತ್ತೇವೆ ಎಂದು ಹೇಳಿದ್ದರು.

ಸಿಎಂ ಬಂಧಿಸುತ್ತೇವೆ ಎಂದು ಲೈವ್‌ನಲ್ಲಿ ಹೇಳಿದ್ದರಿಂದ ಪೊಲೀಸರು ಸ್ಥಳಕ್ಕೆ ತೆರಳುವ ಮೊದಲೇ ಆರೋಪಿಗಳು ಪರಾರಿಯಾಗಿದ್ದಾರೆ. ಒಂದು ವೇಳೆ ಸಿಎಂ ತಪ್ಪಿತ್ತಸ್ಥರ ವಿರುದ್ಧ ಕ್ರಮ ಆಗಲಿದೆ ಎಂದಿದ್ದರೆ ಆರೋಪಿಗಳು ಪರಾರಿಯಾಗುವ ಸಾಧ್ಯತೆ ಕಡಿಮೆ ಇತ್ತು.

 

ಬಂಧಿತರು ಯಾರು?
ಡಿಎನ್‌ಎ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಮೂವರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಓಬ್ಬರು ಸೇರಿ ನಾಲ್ವರನ್ನು ಪೊಲೀಸರು (Bengaluru Police) ಬಂಧಿಸಿದ್ದಾರೆ. ಡಿಎನ್‌ಎ ಇವೆಂಟ್‌ ಮ್ಯಾನೇಜ್ಮೆಂಟ್‌ನ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ವಿನೋದ್ ಬಂಧನವಾಗಿದ್ದರೆ ಕೆಎಸ್‌ಸಿಎ ಪ್ರತಿನಿಧಿಯ ಹೆಸರು ಬಹಿರಂಗವಾಗಿಲ್ಲ.

ಆರೋಪಿಗಳಾಗಬೇಕಿದ್ದ ಕೆಎಸ್‌ಸಿಎ ಪ್ರಮುಖರು ರಾತ್ರಿಯೇ ಪರಾರಿಯಾಗಿದ್ದು ಅವರ ಪತ್ತೆಗೆ ಪೊಲೀಸರು ಈಗ ಶೋಧ ನಡೆಸುತ್ತಿದ್ದಾರೆ.