ಪಂದ್ಯಶ್ರೇಷ್ಠ ಗೆದ್ದು ಐಪಿಎಲ್‌ನಲ್ಲಿ ದಾಖಲೆ ಬರೆದ ಕೃನಾಲ್‌!

ಅಹಮದಾಬಾದ್‌: ಆರ್‌ಸಿಬಿ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ (Krunal Pandya) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಐಪಿಎಲ್‌ನಲ್ಲಿ (IPL) ವಿಶೇಷ ದಾಖಲೆ (Record) ಬರೆದಿದ್ದಾರೆ.

ಎರಡು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೃನಾಲ್‌ ಪಾತ್ರವಾಗಿದ್ದಾರೆ. 2017ರಲ್ಲಿ ಪುಣೆ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ತಂಡ ಫೈನಲ್‌ನಲ್ಲಿ ಗೆದ್ದಾಗಲೂ ಕೃನಾಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.

ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ 8 ವಿಕೆಟ್‌ ನಷ್ಟಕ್ಕೆ 129 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕೃನಾಲ್‌ 47 ರನ್‌(38 ಎಸೆತ, 3 ಬೌಂಡರಿ, 2 ಸಿಕ್ಸ್‌) ಹೊಡೆದಿದ್ದರು. ಈ ಪಂದ್ಯವನ್ನು ಮುಂಬೈ ರೋಚಕ 1 ರನ್‌ಗಳಿಂದ ಗೆದ್ದುಕೊಂಡಿತ್ತು.

ಪಂದ್ಯವನ್ನು ತಿರುಗಿಸಿದ್ದ ಕೃನಾಲ್‌:
ಫೈನಲ್‌ ಪಂದ್ಯ ಪಂಜಾಬ್‌ ಕಡೆ ವಾಲಿತ್ತು. ಆದರೆ 7ನೇ ಓವರ್‌ನಿಂದ ಕೃನಾಲ್‌ ಪಾಂಡ್ಯ ಕೈಚಳಕದಿಂದಾಗಿ ಪಂದ್ಯ ಆರ್‌ಸಿಬಿ (RCB) ಕಡೆ ವಾಲಿತ್ತು. ಅಂತಿಮವಾಗಿ 4 ಓವರ್‌ನಲ್ಲಿ ಕೇವಲ 17 ರನ್‌, 2 ವಿಕೆಟ್‌ ಪಡೆಯುವ ಮೂಲಕ ಪಂಜಾಬ್‌ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದರು.

ಪಂಜಾಬ್‌ 6 ಓವರ್‌ ಅಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು.  ಈ ಹಂತದಲ್ಲಿ ರಜತ್‌ ಪಾಟಿದಾರ್‌ ಕೃನಾಲ್‌ ಪಾಂಡ್ಯ (Krunal Pandya) ಕೈಗೆ ಚೆಂಡು ನೀಡಿದರು. ಕೃನಾಲ್‌ ತಮ್ಮ ಮೊದಲ ಓವರ್‌ನಲ್ಲಿ 3 ರನ್‌ ನೀಡಿ ರನ್‌ಗೆ ಕಡಿವಾಣ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿ ಪ್ರಭುಸಿಮ್ರಾನ್‌ ಸಿಂಗ್‌ ಅವರನ್ನು ಔಟ್‌ ಮಾಡಿದರು. ಈ ಓವರ್‌ನಲ್ಲಿ ಕೇವಲ 4 ರನ್‌ ಮಾತ್ರ ನೀಡಿದರು.

ತಮ್ಮ ಮೂರನೇ ಓವರ್‌ನಲ್ಲಿ 11 ರನ್‌ ನೀಡಿದ ಕೃನಾಲ್‌ ತಮ್ಮ ಕೊನೆಯ ಓವರ್‌ನಲ್ಲಿ ಜೋಶ್‌ ಇಂಗ್ಲಿಸ್‌ ಅವರನ್ನು ಔಟ್‌ ಮಾಡಿದರು. ಸಿಕ್ಸ್‌ ಹೊಡೆಯಲು ಹೋದ ಇಂಗ್ಲಿಸ್‌ ಅವರ ಕ್ಯಾಚನ್ನು ಬೌಂಡರಿ ಬಳಿ ಲಿವಿಂಗ್‌ಸ್ಟೋನ್ ಹಿಡಿದರು. ಇಲ್ಲಿಂದ ಪಂದ್ಯದ ದಿಕ್ಕೇ ಬದಲಾಯಿತು.

4 ಓವರ್‌ನಲ್ಲಿ ರನ್‌ ನಿಯಂತ್ರಣ ಮಾಡಿದ್ದು ಅಲ್ಲದೇ 2 ವಿಕೆಟ್‌ ತೆಗೆಯುವ ಮೂಲಕ ಕೃನಾಲ್‌ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಪಂಜಾಬ್‌ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಕೊನೆಗೆ ಸೋಲನ್ನು ಒಪ್ಪಿಕೊಂಡಿತು.

ಹಾಗೆ ನೋಡಿದ್ರೆ 4 ಓವರ್‌ ಎಸೆದ ಭುವನೇಶ್ವರ್‌ ಕುಮಾರ್‌ 38 ರನ್‌ ನೀಡಿದ್ರೆ ಹೆಜಲ್‌ವುಡ್‌ 54 ರನ್‌ ನೀಡಿ ದುಬಾರಿಯಾಗಿದ್ದರು. ಸುಯಾಶ್‌ ಶರ್ಮಾ 2 ಓವರ್‌ ಎಸೆದಿದ್ದರೂ 19 ರನ್‌ ನೀಡಿದ್ದರು. ರೋಮಾರಿಯೋ ಶೆಪರ್ಡ್‌ 3 ಓವರ್‌ ಎಸೆದು 30 ರನ್‌ ಕೊಟ್ಟಿದ್ದರು.