ಪ್ರತಿ ರಕ್ತದ ಹನಿಗೂ ಸೇಡು ತೀರಿಸಿಕೊಳ್ತೀವಿ – ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

ಇಸ್ಲಾಮಾಬಾದ್‌: ಉಗ್ರ ತಾಣಗಳ ಮೇಲೆ ಭಾರತ ನಡೆಸಿದ ದಾಳಿಯಿಂದ ಪಾಕ್‌ಗೆ ನಡುಕ ಹುಟ್ಟಿರುವುದು ಮತ್ತೆ ಸ್ಪಷ್ಟವಾದಂತೆ ಕಾಣ್ತಿದೆ. ಹೀಗಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ (Shahbaz Sharif) ಭಾರತದ ವಿರುದ್ಧ ಕಟು ಹೇಳಿಕೆಗಳನ್ನ ನೀಡಿದ್ದಾರೆ.

ಬುಧವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಷರೀಫ್‌, ಭಾರತ (India) ತೀವ್ರ ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ, ಅವರು ಮಾಡಿದ ತಪ್ಪಿಗೆ ಭಾರೀ ಬೆಲೆ ತೆರಬೇಕಾಗುತ್ತದೆ. ಪ್ರತಿ ರಕ್ತದ ಹನಿಗೂ ಸೇಡು ತೀರಿಸಿಕೊಳ್ತೀವಿ ಎಂದರಲ್ಲದೇ ನಾವು ದೇಶವನ್ನು ರಕ್ಷಿಸಲು ನಮ್ಮ ಕೊನೆಯುಸಿರು ಇರುವವರೆಗೂ ಹೋರಾಡುತ್ತೇವೆ ಎಂದಿದ್ದಾರೆ.

ದಾಳಿ ಒಪ್ಪಿಕೊಳ್ಳದ ಪಾಕ್‌:
ಅಲ್ಲದೇ ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ ದಾಳಿ ಕುರಿತು ಮತ್ತೆ ಪ್ರಸ್ತಾಪಿಸಿದ ಷರೀಫ್‌, ಪಹಲ್ಗಾಮ್‌ ದಾಳಿ (Pahalgam Terrorist Attack Attack) ನಡೆದಾಗ ನಾನು ಟರ್ಕಿಗೆ ಭೇಟಿ ನೀಡಿದ್ದೆ. ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆಗಲೇ ನಾವು ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ, ತನಿಖೆಗೆ ಸಹಕರಿಸಲೂ ಸಿದ್ಧರಿದ್ದೇವೆ ಎಂದು ಹೇಳಿದ್ದೆವು. ಆದ್ರೆ ಭಾರತ ನಮ್ಮ ಸ್ಪಷ್ಟನೆಯನ್ನು‌ ಸ್ವೀಕರಿಸದೇ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡುತ್ತಾ, ಭಾರತದ ದಾಳಿಯನ್ನು ವಿಫಲಗೊಳಿಸಿದ್ದೇವೆ. ಭಾರತದ ದಾಳಿ ಅಚ್ಚರಿ ಮೂಡಿಸಿತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಭಾರತೀಯ ವಿಮಾನಗಳು ತಮ್ಮ ದೇಶವನ್ನು ಪ್ರವೇಶಿಸಿದರೆ ಸಮುದ್ರಕ್ಕೆ ಎಸೆಯಲು ಪಾಕಿಸ್ತಾನ ವಾಯುಪಡೆ ಸಿದ್ಧವಾಗಿದೆ ಮತ್ತು ಅದಕ್ಕಾಗಿ ಕಾಯುತ್ತಿದೆ. ಪಾಕಿಸ್ತಾನವು 5 ರಫೇಲ್ ಜೆಟ್‌ಗಳು ಮತ್ತು 2 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಹಸಿಹಸಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದರು.

ಏನಿದು ʻಆಪರೇಷನ್‌ ಸಿಂಧೂರʼ?
ಕಳೆದ ಏಪ್ರಿಲ್‌ 22ರಂದು ಕಾಶ್ಮೀರದ ಪೆಹಲ್ಗಾಮ್‌ನ ಬೈಸರನ್‌ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ಮಂಗಳವಾರ ತಡರಾತ್ರಿ 1:44 ಗಂಟೆ ಸುಮಾರಿಗೆ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್‌ ಸೇನೆಯಾಗಲಿ ಅಥವಾ ನಾಗರಿಕರ ಮೇಲಾಗಲಿ ದಾಳಿ ಮಾಡದೇ ಉಗ್ರರ ನೆಲೆಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದೆ.

ಮೋಸ್ಟ್‌ವಾಂಟೆಡ್‌ಗಳನ್ನ ತಯಾರು ಮಾಡ್ತಿದ್ದ ನೆಲೆಗಳು ಧ್ವಂಸ:
ಭಾರತ ಧ್ವಂಸ ಮಾಡಿರುವ ಈ ಉಗ್ರರ ನೆಲೆಗಳು ಮೋಸ್ಟ್‌ ಡೇಂಜರಸ್‌ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.