IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

ಬೆಂಗಳೂರು: ಕೊನೆಯ ಓವರ್‌ನಲ್ಲಿ ನೋಬಾಲ್‌ ಯಡವಟ್ಟಿನ ಹೊರತಾಗಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಸಿಎಸ್‌ಕೆ (CSK), ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ ವಿರೋಚಿತ ಸೋಲಿಗೆ ತುತ್ತಾಯಿತು. ಆದ್ರೆ ಡೆತ್‌ ಓವರ್‌ನಲ್ಲಿ ಕಂಬ್ಯಾಕ್‌ ಮಾಡಿದ ಆರ್‌ಸಿಬಿ 2 ರನ್‌ಗಳ ರೋಚಕ ಗೆಲುವು ಸಾಧಿಸಿತು.

ಈ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ನಂ.1 ಸ್ಥಾನಕ್ಕೇರಿದ್ದು, ಪ್ಲೇ ಆಫ್‌ ಹಾದಿ ಬಹುತೇಕ ಖಚಿತಪಡಿಸಿಕೊಂಡಿದೆ. ಜೊತೆಗೆ 16 ವರ್ಷಗಳ ಐಪಿಎಲ್‌ (IPL 2025) ಇತಿಹಾಸದಲ್ಲಿ ಮೊದಲ ಬಾರಿಗೆ ಸತತ 2 ಬಾರಿ ಸಿಎಸ್‌ಕೆ ವಿರುದ್ಧ ಗೆದ್ದು ಬೀಗಿದ ಸಾಧನೆ ಮಾಡಿದೆ.

214 ರನ್‌ಗಳ ಬೃಹತ್‌ ಚೇಸಿಂಗ್‌ ಆರಂಭಿಸಿದ್ದ ಸಿಎಸ್‌ಕೆ 16 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 171 ರನ್‌ ಕೆಲಹಾಕಿ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ 17ನೇ ಓವರ್‌ನಲ್ಲಿ ಸ್ಪೋಟಕ ಆಟವಾಡುತ್ತಿದ್ದ ಆಯುಷ್‌ ಮಾತ್ರೆ, ದೇವಾಲ್‌ ಬ್ರೇವಿಸ್‌ ವಿಕೆಟ್‌ ಒಪ್ಪಿಸಿದ್ರು. ಇದು ಆರ್‌ಸಿಬಿ ಗೆಲುವಿಗೆ ಬಹುದೊಡ್ಡ ಟರ್ನಿಂಗ್‌ ನೀಡಿತು. ಬ್ರೇವಿಸ್‌ (Dewald Brevis) ಎಲ್‌ಬಿಡಬ್ಲ್ಯೂಗೆ ತುತ್ತಾದರು, ರಿವ್ಯೂ ತೆಗೆದುಕೊಳ್ಳುವಷ್ಟರಲ್ಲಿ ಸಮಯ ಮೀರಿತ್ತು. ಹೀಗಾಗಿ ಅಂಪೈರ್ಸ್‌ ಕಾಲ್‌ ಪ್ರಕಾರ ಔಟ್‌ ತೀರ್ಪು ನೀಡಲಾಯಿತು. ಅಲ್ಲದೇ ಕೊನೆಯ ಓವರ್‌ನ 3ನೇ ಎಸೆತದಲ್ಲಿ ಎಂ.ಎಸ್‌ ಧೋನಿ ಸಹ ಎಲ್‌ಬಿಎಬ್ಲ್ಯೂಗೆ ತುತ್ತಾಗಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಿತು.

ಆಯುಷ್‌ ಮಾತ್ರೆ 94 ರನ್‌ (48 ಎಸೆತ, 5 ಸಿಕ್ಸರ್‌, 9 ಬೌಂಡರಿ), ಶೈಕ್‌ ರಶೀದ್‌ 14 ರನ್‌, ಸ್ಯಾಮ್‌ ಕರ್ರನ್‌ 5 ರನ್‌, ಜಡೇಜಾ 77 ರನ್‌ (45 ಎಸೆತ, 2 ಸಿಕ್ಸರ್‌, 8 ಬೌಂಡರಿ), ಎಂ.ಎಸ್‌ ಧೋನಿ 12 ರಮ್‌, ಶಿವಂ ದುಬೆ 8 ರನ್‌ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತ್ತು. ಮೊದಲ ವಿಕೆಟ್‌ಗೆ ವಿರಾಟ್ ಕೊಹ್ಲಿ ಮತ್ತು ಜಾಕೊಬ್ ಬೆಥೆಲ್ ಜೋಡಿ 59 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿತ್ತು. ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ರನ್ ವೇಗವೂ ಕಡಿತಗೊಂಡಿತ್ತು. 14 ಓವರ್‌ಗಳಲ್ಲಿ 144 ರನ್ ಗಳಿಸಿದ್ದ ಆರ್‌ಸಿಬಿ 18 ಓವರ್ ಕಳೆದರೂ 160 ರನ್ ಗಡಿ ದಾಟುವಲ್ಲಿ ವಿಫಲವಾಗಿತ್ತು.

ಇದರಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವುದೂ ಕಷ್ಟವಾಗಿತ್ತು. ಆದ್ರೆ ಕೊನೆಯಲ್ಲಿ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್ 19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 33 ರನ್ ಚಚ್ಚಿದರು. ಜೊತೆಗೆ 20ನೇ ಓವರ್‌ನಲ್ಲಿ ಬರೋಬ್ಬರಿ 20 ರನ್ ಚಚ್ಚಿದ ಪರಿಣಾಮ ಆರ್‌ಸಿಬಿ ಸುಲಭವಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಆರ್‌ಸಿಬಿ ಪರ ವಿರಾಟ್ ಕೊಗ್ಲಿ 62 ರನ್ (33 ಎಸೆತ, 5 ಸಿಕ್ಸರ್, 5 ಬೌಂಡರಿ), ಬೆಥೆಲ್ 55 ರನ್ (33 ಎಸೆತ, 2 ಸಿಕ್ಸರ್, 8 ಬೌಂಡರಿ), ರೊಮಾರಿಯೊ ಶೆಫರ್ಡ್ 53 ರನ್ (14 ಎಸೆತ, 6 ಸಿಕ್ಸರ್, 4 ಬೌಂಡರಿ) ಚಚ್ಚಿದರು. ಇನ್ನುಳಿದಂತೆ ದೇವದತ್ ಪಡಿಕಲ್ 17 ರನ್, ರಜತ್ ಪಾಟಿದಾರ್ 11 ರನ್, ಜಿತೇಶ್ ಶರ್ಮಾ 7 ರನ್, ಟಿಮ್ ಡೇವಿಡ್ 2 ರನ್ ಕೊಡುಗೆ ನೀಡಿದರು.

ಸಿಎಸ್‌ಕೆ ಪರ ಮತೀಶ ಪಥಿರಣ 3 ವಿಕೆಟ್ ಕಿತ್ತರೆ, ನೂರ್ ಅಹ್ಮದ್, ಸ್ಯಾಮ್ ಕರ್ರನ್ ತಲಾ ಒಂದೊAದು ವಿಕೆಟ್ ಪಡೆದು ಮಿಂಚಿದರು.