ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್‌ ಗಾಯಬ್ ಪೋಸ್ಟರ್‌ ಡಿಲೀಟ್‌ – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ಸಂಬಂಧ ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಗುರಿಯಾಗಿಸಿ ಪ್ರಕಟಿಸಿದ್ದ ಪೋಸ್ಟರ್‌ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕಾಂಗ್ರೆಸ್‌ (Congress) ಈಗ ಡಿಲೀಟ್‌ ಮಾಡಿದೆ.

`ಕುರ್ತಾ, ಚೂಡಿದಾರ್ ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ಮೇಲೆ ‘ಗಾಯಬ್’ (ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟರ್ ಹಾಕಿ ಕಾಂಗ್ರೆಸ್ ಅಧಿಕೃತವಾಗಿ ಟ್ವೀಟ್ ಮಾಡಿತ್ತು

ಮೂಲಗಳ ಪ್ರಕಾರ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಅವರನ್ನು ಕೆಲ ಕೈ ಹಿರಿಯ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೋಸ್ಟರ್‌ ಅನ್ನು ಪ್ರಕಟಿಸಲು ಅನುಮತಿ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಪೋಸ್ಟರ್‌ ಅನ್ನು ಡಿಲೀಟ್‌ ಮಾಡಲಾಗಿದೆ.

ಸುಪ್ರಿಯಾ ಶ್ರೀನಾಟೆ ಪ್ರತಿಕ್ರಿಯಿಸಿ, ಬಿಜೆಪಿ ವಿಷದಿಂದ ತುಂಬಿದೆ ಮತ್ತು ಕಲುಷಿತ ಮನಸ್ಸಿನ ಜನರು ಪೋಸ್ಟರ್‌ ನೋಡಿದ್ದಾರೆ. ಆದರೆ ಆ ಪೋಸ್ಟ್ ತುಷಾರ್ ಕಪೂರ್ ನಟಿಸಿದ ‘ಗಯಾಬ್’ ಚಿತ್ರದ ಪೋಸ್ಟರ್‌ನಿಂದ ಪ್ರೇರಿತವಾಗಿದೆ… ಇದರಲ್ಲಿ (ಪೋಸ್ಟ್) ಪ್ರಧಾನಿ ಮೋದಿಯ ಹೆಸರಿಲ್ಲ. ಹಾಗಾದರೆ, ಇದು ಪ್ರಧಾನಿ ಮೋದಿ ಬಗ್ಗೆ ಎಂದು ಬಿಜೆಪಿ ಏಕೆ ಭಾವಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ‘ಗಯಬ್’ ಎಂದು ಅವರು ಒಪ್ಪಿಕೊಳ್ಳುತ್ತಾರೆಯೇ? ಪ್ರಧಾನಿ ಕಾಶ್ಮೀರದಿಂದ ಕಾಣೆಯಾಗಿ ಬಿಹಾರಕ್ಕೆ ಹೋಗಬಾರದಿತ್ತು, ಅವರು ಸರ್ವಪಕ್ಷ ಸಭೆಯನ್ನು ತಪ್ಪಿಸಿಕೊಳ್ಳಬಾರದಿತ್ತು? ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಬೇಕಿತ್ತು ಎಂದು ಅವರು ಒಪ್ಪಿಕೊಳ್ಳುತ್ತಿದ್ದಾರೆಯೇ? ನಮ್ಮ ಬಿಎಸ್‌ಎಫ್ ಜವಾನರಲ್ಲಿ ಒಬ್ಬರನ್ನು ಪಾಕಿಸ್ತಾನ ಸೆರೆಹಿಡಿದಿದೆ ಮತ್ತು ಪ್ರಧಾನಿ ಕಾಣೆಯಾಗಿದ್ದಾರೆ ಮತ್ತು ಏನನ್ನೂ ಹೇಳುತ್ತಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಿದ್ದಾರೆಯೇ ಎಂದು ಕೇಳಿದರು.

ಪಹಲ್ಗಾಮ್ ದಾಳಿ ಬಳಿಕ ನಡೆದ ಸರ್ವಪಕ್ಷ ಸಭೆಗೆ ಗೈರಾಗಿದ್ದ ಮೋದಿಯನ್ನು ಟೀಕಿಸಿ, ಜವಾಬ್ದಾರಿ ಸಮಯದಲ್ಲಿ ನಾಪತ್ತೆ ಅಂತ ಶೀರ್ಷಿಕೆ ನೀಡಿತ್ತು. ಪೋಸ್ಟರ್‌ನಲ್ಲಿ ಯಾರ ಮುಖವೂ ಇಲ್ಲ. ಆದರೆ, ಫೋಟೋ ಶೈಲಿ ಪ್ರಧಾನಮಂತ್ರಿ ಮೋದಿಯವರನ್ನು ಹೋಲುವಂತಿತ್ತು.

 

ಕಾಂಗ್ರೆಸ್ ಟ್ವೀಟನ್ನು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಅಹ್ಮದ್ ಹುಸೇನ್ ಚೌಧರಿ ಶೇರ್ ಮಾಡಿದ್ದ.`ಕತ್ತೆಯ ತಲೆಯಿಂದ ಕೊಂಬುಗಳು ಕಾಣೆಯಾಗಿವೆ ಎಂದು ಕೇಳಿದ್ದೆ, ಆದರೆ ಇಲ್ಲಿ ಮೋದಿ ಕಾಣೆಯಾಗಿದ್ದಾರೆ’ ಅಂತ ಅಣಕಿಸಿದ್ದ.

ಈ ಬೆಳವಣಿಗೆ ಬಿಜೆಪಿಗರನ್ನು ಸಿಟ್ಟಿಗೇಳಿಸಿತ್ತು. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿ, ಕಾಂಗ್ರೆಸ್‌ಗೆ ಲಷ್ಕರ್ ಇ ಪಾಕಿಸ್ತಾನ ಕಾಂಗ್ರೆಸ್ ಎಂದಿದ್ದರು. ಕಾಂಗ್ರೆಸ್ ಪಕ್ಷದ ಕೆಲ ನಾಯಕರನ್ನು ಒಟ್ಟಿಗೆ ಸೇರಿಸಿ, ಕಾಂಗ್ರೆಸ್ ಕೈ ಪಾಕಿಸ್ತಾನದ ಜೊತೆಗೆ ಎಂದು ಪೋಸ್ಟ್ ಮಾಡಿ ಬಿಜೆಪಿ ತಿರುಗೇಟು ನೀಡಿತ್ತು.