ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ | ಹಾರಿ ಬಿದ್ದು ಪ್ರಾಣಬಿಟ್ಟ ಮಹಿಳೆ – ವಿಡಿಯೋ ವೈರಲ್‌

ಮುಂಬೈ: ರಸ್ತೆ ದಾಟುತ್ತಿದ್ದ ಮಹಿಳೆಗೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ (Accident) ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ಛತ್ರಪತಿ ಸಂಭಾಜಿ ನಗರದ ಹೆದ್ದಾರಿಯಲ್ಲಿ ನಡೆದಿದೆ.

ಭೀಕರ ಅಪಘಾತದ ದೃಶ್ಯ ಹೆದ್ದಾರಿಯ ಬಳಿ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೋದಲ್ಲಿ ಮಹಿಳೆ ತಲೆಯ ಮೇಲೆ ಮಡಕೆಯನ್ನು ಇಟ್ಟುಕೊಂಡು ರಸ್ತೆ ದಾಟುತ್ತಿದ್ದಳು. ಈ ವೇಳೆ ಕಾರು ವೇಗವಾಗಿ ಬಂದು ಮಹಿಳೆಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮಹಿಳೆ, ಕಾರಿಗಿಂತಲೂ ಎತ್ತರಕ್ಕೆ ಹಾರಿ, ರಸ್ತೆ ಮೇಲೆ ಬಿದ್ದಿದ್ದಾಳೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆ ಕೇಸ್‌ – ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರಾ ಪತ್ನಿ ಪಲ್ಲವಿ?

ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಪೈಥಾನ್ ತಾಲೂಕಿನ ಕತ್ಪುರ ನಿವಾಸಿ ಸಿಂಧುಬಾಯಿ ರಂಭಾವು ಗಲ್ಫಡೆ ಎಂದು ಗುರುತಿಸಲಾಗಿದೆ. ಮಹಿಳೆ ಜಯಕ್ವಾಡಿ ಮಾರುಕಟ್ಟೆಗೆ ತೆರಳಿ ವಾಪಸ್‌ ಆಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪಘಾತದ ಬಳಿಕ ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಸಂಬಂಧ ಪೈಥಾನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಅಥಣಿ| ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಕಾಮುಕ ಜೈಲುಪಾಲು