ಉಕ್ರೇನ್‌ನ ಸುಮಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – 21 ಮಂದಿ ಸಾವು

ಕೀವ್: ಉತ್ತರ ಉಕ್ರೇನಿಯನ್ (Ukraine) ನಗರದ ಸುಮಿಯ ಹೃದಯಭಾಗದಲ್ಲಿ ಭಾನುವಾರ ಬೆಳಗ್ಗೆ ನಡೆದ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ (Russian Missile Strike) ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. 83 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಆಂತರಿಕ ಸಚಿವ ಇಹೋರ್ ಕ್ಲಿಮೆಂಕೊ ಹೇಳಿದ್ದಾರೆ.

ಈ ವರ್ಷ ಉಕ್ರೇನ್ ಮೇಲೆ ನಡೆದ ಅತ್ಯಂತ ಭೀಕರ ದಾಳಿಯನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ. ‘ಕಿಡಿಗೇಡಿಗಳು ಮಾತ್ರ ಈ ರೀತಿ ವರ್ತಿಸಲು ಸಾಧ್ಯ. ಸಾಮಾನ್ಯ ಜನರ ಜೀವ ತೆಗೆಯಲಾಗುತ್ತಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಭಾರತದ ಕಂಪನಿಗಳೇ ಟಾರ್ಗೆಟ್ ಎಂದ ಉಕ್ರೇನ್‌

ಇಂದು ಜನರು ಚರ್ಚ್‌ಗೆ ಹೋಗುವ ದಿನ. ಪಾಮ್‌ ಸಂಡೆ, ಜೆರುಸಲೇಂಗೆ ಭಗವಂತ ಆಗಮಿಸಿದ ದಿನ. ಚರ್ಚ್‌ನ ಪ್ರಮುಖ ಹಬ್ಬದ ದಿನದಂದೇ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ರಷ್ಯಾ ವಿರುದ್ಧ ಗುಡುಗಿದ್ದಾರೆ.

ಉಕ್ರೇನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿಯಾಗಿರುವ ವಿಟ್ಕಾಫ್ ಭೇಟಿ ನೀಡಿದ್ದರು. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉಕ್ರೇನ್ ಶಾಂತಿ ಒಪ್ಪಂದದ ಕುರಿತು ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: Donald Trump | ಭಾರತ ಸೇರಿದಂತೆ ಅಮೆರಿಕದಲ್ಲಿರುವ ವಿದೇಶಿಗರು 24×7 ವೀಸಾ ಹೊಂದಿರಬೇಕು

ರಷ್ಯಾದ ಇಂಧನ ಮೂಲಸೌಕರ್ಯದ ಮೇಲೆ ಉಕ್ರೇನ್ ಐದು ಬಾರಿ ದಾಳಿ ನಡೆಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಶನಿವಾರ ಆರೋಪಿಸಿತ್ತು. ಶಾಂತಿ ಒಪ್ಪಂದಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ ಬಳಿಕವೂ ದಾಳಿ ನಡೆಸುತ್ತಿರುವುದು ನಿಯಮದ ಉಲ್ಲಂಘನೆಯಾಗಿದೆ ಎಂದು ರಷ್ಯಾ ಖಂಡಿಸಿತ್ತು.