ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಅಯೋಧ್ಯೆಗೆ ಹೊರಟ ಕೊಪ್ಪಳದ ಮುಸ್ಲಿಂ ಯುವಕ

ಕೊಪ್ಪಳ: ಜಿಲ್ಲೆಯ ಮುಸ್ಲಿಂ ಯುವಕರೊಬ್ಬರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೈತಿಕ ಬೆಂಬಲ ನೀಡಿದ್ದು, ಸಾಂಕೇತಿಕವಾಗಿ ಒಂದು ಸಿಮೆಂಟ್ ಚೀಲ ನೀಡಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಆಟೋ ಚಾಲಕ ಶಂಶುದ್ದೀನ್ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಹೊರಟ ಯುವಕ. ಈ ಸಂಬಂಧ ಕೊಪ್ಪಳದಿಂದ ಲಕ್ನೋಗೆ ಪ್ರಯಾಣ ಬೆಳೆಸಿದ್ದಾರೆ. ಶಂಶುದ್ದೀನ್ ಕಳೆದ ಕೆಲ ದಿನಗಳ ಹಿಂದೆ ತನ್ನ ಫೇಸ್‍ಬುಕ್‍ನಲ್ಲಿ ರಾಮಮಂದಿರ ಕಟ್ಟಲು ಒಂದು ಚೀಲ ಸಿಮೆಂಟ್ ಒಯ್ಯುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಈ ವೇಳೆ ಶಂಶುದ್ದೀನ್ ಅವರಿಗೆ ಸಾಕಷ್ಟು ಬೆದರಿಕೆ ಕರೆ ಬಂದಿದ್ದವು ಎನ್ನಲಾಗಿದೆ.

ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಶಂಶುದ್ದೀನ್ ಪ್ರವೃತ್ತಿಯಲ್ಲಿ ಸಿನಿಮಾ ಕಲಾವಿದ. ಬಿಡುಗಡೆ ಹಂತದಲ್ಲಿರುವ ಲಂಬಾಣಿ ಭಾಷೆಯ ಕೋವೆಲ್ ಮತ್ತು ನಟ ಲೂಸ್ ಮಾದ ನಟಿಸಿರುವ ಧೂಳಿಪಟ ಚಿತ್ರದಲ್ಲಿ ಶಂಶುದ್ದೀನ ಖಳನಾಯಕರಾಗಿ ಅಭಿನಯಿಸಿದ್ದಾರೆ. ಶಂಶುದ್ದೀನ್ ಅವರಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು ಸನ್ಮಾನಿಸಿ, ಬೀಳ್ಕೊಟ್ಟಿದ್ದಾರೆ.

ಕೊಪ್ಪಳದಿಂದ ಅಯೋಧ್ಯೆಗೆ ತೆರಳಿ ಅಲ್ಲಿಯೇ ಸಿಮೆಂಟ್ ನೀಡಲು ಶಂಶುದ್ದೀನ್ ನಿರ್ಧರಿಸಿದ್ದಾರೆ. ಭಾವೈಕ್ಯತೆ ಸಂಕೇತವಾಗಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಈ ನಿರ್ಧಾರವನ್ನು ಶಂಶುದ್ದೀನ್ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *