ಕದನ ವಿರಾಮ ಮಾತುಕತೆ ನಡ್ವೆ ರಷ್ಯಾ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ 5 ವರ್ಷದ ಮಗು ಸೇರಿ 7 ಮಂದಿ ಸಾವು

ಕೈವ್‌/ಮಾಸ್ಕೋ: ಉಕ್ರೇನ್‌ ಮತ್ತು ರಷ್ಯಾದ (Ukraine vs Russia) ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಸತತ ಪ್ರಯತ್ನ ಮಾಡುತ್ತಿರುವ ಅಮೆರಿಕ ಶೀಘ್ರವೇ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಳ್ಳುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಕದನ ವಿರಾಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾದಲ್ಲಿ ಮಾತುಕತೆ ನಡೆಯುತ್ತಿದೆ. ಈ ನಡುವೆ ರಷ್ಯಾ ಉಕ್ರೇನ್‌ನಾದ್ಯಂತ ಡ್ರೋನ್‌ ದಾಳಿ (Russia Drone Attack) ನಡೆಸಿದೆ.

ಭಾನುವಾರ ತಡರಾತ್ರಿ ರಷ್ಯಾ ಸೇನೆ ಏಕಾಏಕಿ 147 ಡ್ರೋನ್‌ಗಳಿಂದ ಉಕ್ರೇನ್‌ ಮೇಲೆ ದಾಳಿ ನಡೆಸಿದೆ. ಭೀಕರ ದಾಳಿಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಕೈವ್‌ನಲ್ಲಿ 5 ವರ್ಷದ ಮಗು ಸೇರಿ ಮೂವರು, ಡೊನೆಕ್ಸ್ಟ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ವೆಬ್‌ಸೈಟ್‌ವೊಂದರಲ್ಲಿ ಹಾಟ್‌ ಫೋಟೊ, ವೀಡಿಯೋ ಹಂಚಿಕೊಂಡು ಹಣ ಗಳಿಸುತ್ತಿದ್ದ ಟೀಚರ್‌ ಅಮಾನತು

ಡ್ರೋನ್‌ ದಾಳಿಯ ತೀವ್ರತೆಗೆ ಉಕ್ರೇನ್‌ನ ಕೈವ್‌, ಸುಮಿ, ಚೆರ್ನಿಹಿವ್‌, ಒಡೆಸಾ, ಡೊನೆಕ್ಸ್ಟ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೂಲ ಸೌಕರ್ಯಗಳು, ಕಟ್ಟಡಗಳು ಹಾನಿಯಾಗಿವೆ. ರಷ್ಯಾ ಸುಮಾರು 147 ಡ್ರೋನ್‌ಗಳನ್ನು ಉಡಾವಣೆ ಮಾಡಿತ್ತು. ಈ ಪೈಕಿ 97 ಡ್ರೋನ್‌ಗಳನ್ನು ಉಕ್ರೇನ್‌ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಉಕ್ರೇನ್‌ ಸೇನೆ ಹೇಳಿಕೊಂಡಿದೆ. ಇದನ್ನೂ ಓದಿ: ಗಬಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು – ಹಕ್ಕಿಪಿಕ್ಕಿ ಸಮುದಾಯದ ನಾಟಿ ವೈದ್ಯರಿಗೆ ದೇಶ ತೊರೆಯಲು ಸೂಚನೆ

ಅಲ್ಲದೇ ಈ ವಾರದಲ್ಲಿ ರಷ್ಯಾ 1,500ಕ್ಕೂ ಬಾಂಬ್‌ಗಳು, 1,100 ಡ್ರೋನ್‌ಗಳು ಹಾಗೂ ವಿವಿಧ ರೀತಿಯ 15 ಮಿಸೈಲ್‌ಗಳನ್ನು ನಮ್ಮ ವಿರುದ್ಧ ಬಳಸಿದೆ ಎಂದು ಉಕ್ರೇನ್‌ ಹೇಳಿದೆ. ಇದನ್ನೂ ಓದಿ: ಗಾಜಾದಲ್ಲಿ ಇಸ್ರೇಲ್ ವಾಯುದಾಳಿಗೆ ಹಮಾಸ್ ರಾಜಕೀಯ ನಾಯಕ ಬಲಿ