ಗಬಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು – ಹಕ್ಕಿಪಿಕ್ಕಿ ಸಮುದಾಯದ ನಾಟಿ ವೈದ್ಯರಿಗೆ ದೇಶ ತೊರೆಯಲು ಸೂಚನೆ

ದಾವಣಗೆರೆ: ಉದ್ಯೋಗ ಅರಸಿ ಮಧ್ಯ ಆಫ್ರಿಕಾದ ಗಬಾನ್‍ಗೆ (Gabon) ತೆರಳಿರುವ ಚನ್ನಗಿರಿ (Channagiri) ತಾಲೂಕಿನ ಹಕ್ಕಿಪಿಕ್ಕಿ ಸಮುದಾಯದವರು ಅಲ್ಲಿನ ಹೊಸ ನೀತಿಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಯುರ್ವೇದ ತೈಲದ ವ್ಯಾಪಾರಕ್ಕಾಗಿ ಗಬಾನ್‍ನ ರಾಜಧಾನಿ ಲಿಬ್ರೆವಿಲ್‍ಗೆ ಕೆಲವು ತಿಂಗಳ ಹಿಂದೆ ಅಸ್ತಾಪನಹಳ್ಳಿ ಹಾಗೂ ಗೋಪನಾಳ್ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ನಾಟಿ ವೈದ್ಯರು ತೆರಳಿದ್ದರು. ಇದರಲ್ಲಿ 25ಕ್ಕೂ ಹೆಚ್ಚು ಜನರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ 10 ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ.

ಬಂಧಿತರಿಗೆ ದೇಶ ಬಿಟ್ಟು ಸ್ವದೇಶಕ್ಕೆ ವಾಪಸಾಗುವಂತೆ ತಾಕೀತು ಮಾಡಿರುವ ಪೊಲೀಸರು, ಅವರ ಪಾಸ್‍ಪೋರ್ಟ್ ವಶಕ್ಕೆ ಪಡೆದಿದ್ದಾರೆ ಎಂದು ಸಂಕಷ್ಟಕ್ಕೀಡಾಗಿರುವ ಯುವಕರ ಸಂಬಂಧಿಕರು ತಿಳಿಸಿದ್ದಾರೆ. ‌

ಗಾಬಾನ್‍ನಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರ ವಿದೇಶಿಯರಿಗೆ ದೇಶ ಬಿಡುವಂತೆ ಸೂಚಿಸಿದೆ. ಇದರಿಂದ ಹಕ್ಕಿಪಿಕ್ಕಿ ಜನಾಂಗದ ಜನರು ಸಂಕಷ್ಟಕ್ಕೀಡಾಗಿದ್ದು, ಈಗ ತವರುನಾಡಿಗೆ ಬರಲು ತಯಾರಿ ನಡೆಸಿದ್ದಾರೆ. ಮಾ.24ರಂದು ದಾವಣಗೆರೆಯ ಗೋಪನಾಳ್‌ಗೆ ಯುವಕರು ಆಗಮಿಸಲಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.