ಮಣಿಪುರಕ್ಕೆ ಭೇಟಿ ನೀಡಲಿದೆ ಸುಪ್ರೀಂ ಕೋರ್ಟ್ ಐವರು ಜಡ್ಜ್‌ಗಳ ನಿಯೋಗ

ನವದೆಹಲಿ: ಬಿಕ್ಕಟ್ಟಿನಿಂದ ಬಳಲುತ್ತಿರುವ ಮಣಿಪುರ ರಾಜ್ಯದಲ್ಲಿ ಕಾನೂನು ಮತ್ತು ಮಾನವೀಯ ಬೆಂಬಲವನ್ನು ಬಲಪಡಿಸಲು ಸುಪ್ರೀಂ ಕೋರ್ಟ್‌ನ ಆರು ನ್ಯಾಯಾಧೀಶರ ನಿಯೋಗ ಮಾರ್ಚ್ 22 ರಂದು ಭೇಟಿ ನೀಡಲಿದೆ.

ಹಿಂಸಾಚಾರಗಳಿಂದಾಗಿ ಸ್ಥಳಾಂತರಗೊಂಡ ಜನರು ವಾಸಿಸುತ್ತಿರುವ ಪರಿಹಾರ ಶಿಬಿರಗಳಿಗೆ ನಿಯೋಗ ಭೇಟಿ ನೀಡಲಿದೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಹೇಳಿಕೆಯಲ್ಲಿ ತಿಳಿಸಿದೆ.

ಬಿ.ಆರ್.ಗವಾಯಿ, ಸೂರ್ಯ ಕಾಂತ್, ವಿಕ್ರಮ್ ನಾಥ್, ಎಂ.ಎಂ. ಸುಂದರೇಶ್, ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರು ಮಣಿಪುರಕ್ಕೆ ಭೇಟಿ ನೀಡಲಿರುವ ಜಡ್ಜ್‌ಗಳಾಗಿದ್ದಾರೆ.

ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ನೂರಾರು ಜನರು ಬಲಿಯಾದರು. 50,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡರು. ಸಂತ್ರಸ್ತರು ಮಣಿಪುರದಾದ್ಯಂತ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸುಮಾರು 2 ವರ್ಷಗಳ ನಂತರ ಸುಪ್ರೀಂ ಕೋರ್ಟ್‌ ಜಡ್ಜ್‌ಗಳ ನಿಯೋಗವು ಮಣಿಪುರಕ್ಕೆ ಭೇಟಿ ನೀಡುತ್ತಿದೆ ಎಂದು NALSA ಹೇಳಿದೆ.

ಜಡ್ಜ್‌ ಗವಾಯಿ ಅವರು ಮಣಿಪುರದ ಎಲ್ಲಾ ಜಿಲ್ಲೆಗಳಲ್ಲಿ ಕಾನೂನು ಸೇವೆಗಳು ಮತ್ತು ವೈದ್ಯಕೀಯ ಶಿಬಿರಗಳನ್ನು ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ. ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಕಾನೂನು ನೆರವು ಚಿಕಿತ್ಸಾಲಯಗಳನ್ನು ತೆರೆಯಲಿದ್ದಾರೆ ಎಂದು NALSA ತಿಳಿಸಿದೆ. ನಿರಾಶ್ರಿತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಿದ್ದಾರೆ.