ಪತ್ನಿಯನ್ನು ಕೊಂದು 9ವರ್ಷ ತಲೆಮರೆಸಿಕೊಂಡಿದ್ದ ಹಂತಕ – ಬಿಹಾರದಲ್ಲಿ ಬಂಧಿಸಿದ ದೆಹಲಿ ಪೊಲೀಸ್

ನವದೆಹಲಿ: ರಾಜಧಾನಿಯ (Delhi) ರಣಹೋಲಾ ಪ್ರದೇಶದಲ್ಲಿ ಪತ್ನಿಯ ಕತ್ತು ಸೀಳಿ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಿಹಾರದಲ್ಲಿ  (Bihar) ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಆತನ ತಲೆಗೆ 25,000 ರೂ. ಬಹುಮಾನ ಘೋಷಿಸಲಾಗಿತ್ತು. ಆರೋಪಿಯನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 18, 2016 ರಂದು ರಣಹೋಲಾ ಪ್ರದೇಶದ ರೂಮ್‌ ಒಂದರ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯೊಬ್ಬಳ ಕತ್ತು ಸೀಳಿದ ಶವ ಪತ್ತೆಯಾಗಿತ್ತು. ಬೀಗ ಹಾಕಿದ ಕೊಠಡಿಯಿಂದ ಬರುತ್ತಿದ್ದ ದುರ್ವಾಸನೆಯಿಂದ ಎಚ್ಚರಗೊಂಡ ಮನೆ ಮಾಲೀಕರು ಪೊಲೀಸರಿಗೆ ವಿಷಯ ತಿಳಿಸಿದ್ದರು. ತನಿಖೆಯ ನಂತರ, ಸುನಿಲ್ ಪ್ರಕರಣದ ಪ್ರಮುಖ ಶಂಕಿತ ಎಂದು ಗುರುತಿಸಲಾಗಿತ್ತು.

ಹತ್ಯೆಯ ನಂತರ ಸುನಿಲ್ ನಾಲ್ಕು ವರ್ಷದ ಮಗಳನ್ನು ಕರೆದುಕೊಂಡು ಪರಾರಿಯಾಗಿದ್ದ. ದೆಹಲಿ ಪೊಲೀಸರ ಅಪರಾಧ ವಿಭಾಗವು ನಂತರ ಪ್ರಕರಣದ ಬಗ್ಗೆ ಹೊಸ ತನಿಖೆಯನ್ನು ಪ್ರಾರಂಭಿಸಿತ್ತು. ಪೊಲೀಸ್ ತಂಡವು ಅಪರಾಧ ಸ್ಥಳಕ್ಕೆ ಮತ್ತೊಮ್ಮೆ ಭೇಟಿ ನೀಡಿ, ಹಲವಾರು ಸಾಕ್ಷಿಗಳನ್ನು ಕಲೆಹಾಕಿ ಪರಿಶೀಲಿಸಿತ್ತು.

ಆರೋಪಿ ಬಿಹಾರದಲ್ಲಿ ಅಡಗಿಕೊಂಡಿದ್ದಾನೆಂದು ಶಂಕಿಸಲಾಗಿತ್ತು. ನಿರಂತರ ಪ್ರಯತ್ನಗಳ ನಂತರ, ಪೊಲೀಸರು ಶೇಖುಪುರದಿಂದ ಸುನಿಲ್‌ನನ್ನು ಬಂಧಿಸಿ ಹೆಚ್ಚಿನ ಕಾನೂನು ಕ್ರಮಗಳಿಗಾಗಿ ದೆಹಲಿಗೆ ಕರೆತಂದಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಸುನಿಲ್ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಸುನಿಲ್ ಕೊಲೆಯಾದ ಮಹಿಳೆಯನ್ನು ಮದುವೆಯಾಗಿದ್ದ. ಆಗಾಗ ನಡೆಯುತ್ತಿದ್ದ ಜಗಳಗಳಿಂದ ಬೇಸತ್ತು ಒಂದು ದಿನ ಕೊಲೆಗೈದಿದ್ದ. ಬಂಧನವನ್ನು ತಪ್ಪಿಸಲು, ಸುನಿಲ್ ಮೊಬೈಲ್ ಫೋನ್ ಬಳಸುವುದನ್ನು ಬಿಟ್ಟಿದ್ದ. ಪ್ರತಿ ಕೆಲವು ತಿಂಗಳಿಗೊಮ್ಮೆ ತನ್ನ ಅಡಗುತಾಣಗಳನ್ನು ಬದಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.