ಮಹಾ ಅಸೆಂಬ್ಲಿಯಿಂದ ಅಬು ಅಜ್ಮಿ ಸಸ್ಪೆಂಡ್ – ನಮ್ಮಲ್ಲಿಗೆ ಕಳಿಸಿ ಟ್ರೀಟ್ಮೆಂಟ್ ಕೊಡ್ತೀವೆಂದ ಯೋಗಿ

ಮುಂಬೈ/ಲಕ್ನೋ: ಮಹಾರಾಷ್ಟ್ರ ರಾಜಕೀಯದಲ್ಲಿ ಔರಂಗಜೇಬ್ (Aurangzeb) ಜಟಾಪಟಿ ತಾರಕಕ್ಕೇರಿದೆ. ಔರಂಗಜೇಬ್ ಹೊಗಳಿದ್ದ ಸಮಾಜವಾದಿ ಪಕ್ಷದ (SP) ಶಾಸಕ ಅಬು ಅಜ್ಮಿಯನ್ನು (Abu Azmi) ಮಹಾರಾಷ್ಟ್ರ ವಿಧಾನಸಭೆಯಿಂದ (Maharashtra Vidhan Sabha) ಅಧಿವೇಶನ ಅಂತ್ಯವಾಗುವವರೆಗೆ ಅಮಾನತು ಮಾಡಲಾಗಿದೆ.

ಸಚಿವ ಚಂದ್ರಕಾಂತ್ ಪಾಟೀಲ್ ಮಂಡಿಸಿದ ಅಮಾನತು ಪ್ರಸ್ತಾಪಕ್ಕೆ ಮತದಾನದ ಮೂಲಕ ಸದನ ಅನುಮೋದನೆ ನೀಡಿತು. ಈ ಬೆನ್ನಲ್ಲೇ ಅಬು ಅಜ್ಮಿಯನ್ನು ಅಮಾನತು ಮಾಡಲಾಗಿದೆ.

ಅಬು ಅಜ್ಮಿ ವಿರುದ್ಧ ಯುಪಿ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ (Yogi Adityanath) ಸಹ ಕಿಡಿಕಾರಿದ್ದಾರೆ. ಸಮಾಜವಾದಿ ಪಕ್ಷದಿಂದ ಆತನನ್ನು ಕಿತ್ತೆಸೆದು ಉತ್ತರ ಪ್ರದೇಶಕ್ಕೆ ಕಳುಹಿಸಿ. ನಾವು ಸರಿಯಾದ ಉಪಚಾರ ಮಾಡುತ್ತೇವೆ ಎಂದು ಗುಡುಗಿದರು. ಇಂತಹ ವ್ಯಕ್ತಿ ದೇಶದಲ್ಲಿರುವ ಅರ್ಹನೆ ಉತ್ತರಿಸಿ ಎಂದು ಸಮಾಜವಾದಿ ಪಕ್ಷವನ್ನು ಪ್ರಶ್ನಿಸಿದರು. ಸಮಾಜವಾದಿ ಪಕ್ಷ ಅಬು ಅಜ್ಮಿ ಬೆಂಬಲಿಸಿ ಮಾತಾಡಿ ಮತ್ತೆ ಪೇಚಿಗೆ ಸಿಲುಕಿದೆ.

ಗೋವಾ ಬೀದಿಯಲ್ಲಿ ಗಲಾಟೆ ಮಾಡಿದ ಆರೋಪದ ಮೇರೆಗೆ ಶಾಸಕ ಅಬು ಅಜ್ಮಿ ಪುತ್ರ ಫರ್ಹಾನ್ ಅಜ್ಮಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ನಟಿ ಆಯೆಷಾ ಟಕಿಯಾ ಪತಿಯೂ ಆಗಿರುವ ಫರ್ಹಾನ್‌ರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಹೇಳಿಕೆ ಪಡೆದು ಕಳುಹಿಸಿದ್ದಾರೆ. ಇದನ್ನೂ ಓದಿ: ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಮಹಿಳೆಯ ಕೈ ಬಳೆ ಎಳೆದ ಡಿಎಂಕೆ ಕೌನ್ಸಿಲರ್‌

ಅಜ್ಮಿ ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಔರಂಗಜೇಬ್ ನ ಅವಧಿಯಲ್ಲಿ ಭಾರತದ ಗಡಿಗಳು ಅಫ್ಘಾನಿಸ್ತಾನ ಹಾಗೂ ಮ್ಯಾನ್ಮಾರ್‌ವರೆಗೂ ವಿಸ್ತರಿಸಿದ್ದವು, ಆತನ ಆಳ್ವಿಕೆಯಲ್ಲಿ ನಮ್ಮ ಜಿಡಿಪಿ ಜಗತ್ತಿನ ಶೇ.24 ರಷ್ಟಿತ್ತು. ಔರಂಗಜೇಬ್ ಕ್ರೂರಿಯಲ್ಲ, ಹಿಂದೂ ದೇಗುಲ ಕಟ್ಟಿಸಿದ ಮಹಾನ್ ಚಕ್ರವರ್ತಿ ಎಂದು ಅಜ್ಮಿ ಹಾಡಿ ಹೊಗಳಿದ್ದರು. ಈ ಹೊಗಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.  ಇದನ್ನೂ ಓದಿ: ಚೈತ್ರಾ ವಾಸುದೇವನ್‌ ವಿವಾಹವಾದ ಜಾಗದಲ್ಲೇ ಮಾಜಿ ಪತಿಯ ಅದ್ಧೂರಿ ಮದುವೆ