ರೋಹಿತ್‌ ಶರ್ಮಾ ದಪ್ಪಗಿದ್ದಾರೆ – ಕಾಂಗ್ರೆಸ್‌ ವಕ್ತಾರೆ ಪೋಸ್ಟ್, ವಿವಾದದ ಬೆನ್ನಲ್ಲೇ ಪಕ್ಷದಿಂದ ಛೀಮಾರಿ

– ನಾನು ಬಾಡಿ ಶೇಮಿಂಗ್ ಮಾಡಿಲ್ಲ ಎಂದ ಶಮಾ

ಮುಂಬೈ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ (Rohit Sharma) ಕುರಿತು ಎಕ್ಸ್‌ ಪೋಸ್ಟ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್‌ ವಕ್ತಾರೆ ಶಮಾ ಮೊಹಮ್ಮದ್‌ (Shama Mohamed) ಸದ್ಯ ಸುದ್ದಿಯಲ್ಲಿದ್ದಾರೆ.

ರೋಹಿತ್‌ ಶರ್ಮಾ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಶಮಾ, ರೋಹಿತ್‌ ಶರ್ಮಾ ದಪ್ಪಗಿದ್ದಾರೆ. ಅವರು ತೂಕ ಕಳೆದುಕೊಳ್ಳಬೇಕಾಗಿದೆ, ರೋಹಿತ್ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಬರೆದುಕೊಂಡಿದ್ದರು. ಶಮಾ ಹೇಳಿಕೆಗೆ ಬೆನ್ನಲ್ಲೇ ಬಿಜೆಪಿ (BJP) ನಾಯಕರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್‌ ಪಕ್ಷದಿಂದ ಛೀಮಾರಿ
ಶಮಾ ಎಕ್ಸ್‌ನಲ್ಲಿ ನೀಡಿದ ಹೇಳಿಕೆ ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್‌ ಪಕ್ಷ ಛೀಮಾರಿ ಹಾಕಿದ್ದು, ಟ್ವೀಟ್‌ ಡಿಲೀಟ್‌ ಮಾಡುವಂತೆ ತಾಕೀತು ಮಾಡಿದೆ. ಇದನ್ನೂ ಓದಿ: ಮಾ.24 ರಿಂದ 26ವರೆಗೂ ದೆಹಲಿ ಬಜೆಟ್ ಅಧಿವೇಶನ – ಸಾರ್ವಜನಿಕರಿಂದ ಸಲಹೆ ಕೇಳಿದ ಸಿಎಂ

ಶಮಾ ಅವರ ಈ ಹೇಳಿಕೆ ವೈಯಕ್ತಿಕವಾಗಿದ್ದು, ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಪೋಸ್ಟ್ ಅನ್ನು ಡಿಲೀಟ್ ಮಾಡುವಂತೆ ಅವರಿಗೆ ಸೂಚಿಸಲಾಗಿದೆ. ಅಲ್ಲದೇ ಭವಿಷ್ಯದಲ್ಲಿ ಎಚ್ಚರಿಕೆ ವಹಿಸುವಂತೆಯೂ ತಿಳಿಸಲಾಗಿದೆ ಎಂದು ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ತಿಳಿಸಿದ್ದಾರೆ. ಇದನ್ನೂ ಓದಿ: World Wildlife Day – ಗಿರ್ ಅಭಯಾರಣ್ಯದಲ್ಲಿ ಮೋದಿ ಸಫಾರಿ

ಶಮಾ ಮೊಹಮ್ಮದ್ ಯಾರು?
ಶಮಾ ಮೊಹಮ್ಮದ್ 1973ರ ಮೇ 17 ಕೇರಳದ ಕಣ್ಣೂರು ಜಿಲ್ಲೆಯ ಚೆರುಕಲ್ಲೈನಲ್ಲಿ ಜನಿಸಿದರು. ಶಮಾ ಮೊಹಮ್ಮದ್ ಕಾಂಗ್ರೆಸ್ ವಕ್ತಾರರಾಗಿರುವುದರ ಜೊತೆಗೆ ದಂತವೈದ್ಯರೂ ಆಗಿದ್ದಾರೆ. ಕೇರಳ ಮೂಲದ ವೈದ್ಯೆಯಾದ ಶಮಾ 2015 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಮೂಲಗಳ ಪ್ರಕಾರ ಶಮಾ ಕುವೈತ್‌ನ ಇಂಡಿಯನ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಡೆಂಟಲ್ ಸೈನ್ಸಸ್‌ನಲ್ಲಿ ಪದವಿ ಪಡೆದರು.

2018 ರಲ್ಲಿ ಕಾಂಗ್ರೆಸ್ ಅವರನ್ನು ಮೊದಲ ಬಾರಿಗೆ ತನ್ನ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್‌ ಆಗಿ ನೇಮಿಸಿತು. ನಂತರ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ಮಾಡಲಾಯಿತು. ಇದನ್ನೂ ಓದಿ: ಅಕ್ರಮವಾಗಿ ಇಸ್ರೇಲ್‌ ಪ್ರವೇಶಿಸಲು ಯತ್ನಿಸಿದ್ದ ಕೇರಳದ ವ್ಯಕ್ತಿ ಗುಂಡಿಗೆ ಬಲಿ