ಐಸ್‍ಕ್ರೀಮ್ ಮಾರಾಟ ಮಾಡಿ 7.5 ಲಕ್ಷ ಗಳಿಸಿದ ತೆಲಂಗಾಣ ಸಿಎಂ ಮಗ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮ ರಾವ್ ಐಸ್‍ಕ್ರೀಮ್ ಮಾರಾಟ ಮಾಡಿ 7.5 ಲಕ್ಷ ರೂ. ಗಳಿಸಿದ್ದಾರೆ.

ಹೌದು. ಹೈದರಾಬಾದ್ ನಾಗ್ಪುರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಐಸ್‍ಕ್ರೀಂ ಪಾರ್ಲರ್‍ವೊಂದರಲ್ಲಿ ಕೆಲಸ ಮಾಡಿ 1 ಗಂಟೆಗೂ ಕಡಿಮೆ ಅವಧಿಯಲ್ಲಿ ಕೆಟಿ ರಾಮರಾವ್ 7.5 ಲಕ್ಷ ರೂ. ಗಳಿಸಿದ್ರು. ಈ ಐಸ್‍ಕ್ರೀಮ್ ಪಾರ್ಲರ್‍ನವರು ಇಡೀ ತಿಂಗಳಲ್ಲಿ ಗಳಿಸುವ ಹಣ ಇದಕ್ಕಿಂತ ಕಡಿಮೆಯಂತೆ.

ಆದ್ರೆ ಕೆಟಿ ರಾಮರಾವ್ ಅವರ ಬಳಿ ಐಸ್‍ಕ್ರೀಂ ಖರೀದಿಸಿದ ಬಹುತೇಕರು ಪಕ್ಷದ ಕಾರ್ಯಕರ್ತರಾಗದ್ದರು. ಅವರಲ್ಲಿ ಒಬ್ಬರಾದ 63 ವರ್ಷದ ಸಂಸದ ಮಲ್ಲಾ ರೆಡ್ಡಿ 5 ಲಕ್ಷ ರೂ. ಕೊಟ್ಟು ಐಸ್‍ಕ್ರೀಂ ಖರೀದಿಸಿದ್ರು.

ಪಕ್ಷದ ಅದ್ಧೂರಿ ಸಮಾವೇಶಕ್ಕಾಗಿ ಹಣ ಸಂಗ್ರಹಿಸಲು ಎರಡು ದಿನ ಕೂಲಿಗಳಾಗಿ ಕೆಲಸ ಮಾಡಿ ಎಂದು ಸಿಎಂ ಚಂದ್ರಶೇಖರ್ ರಾವ್, ಸಚಿವರಿಗೆ, ಮುಖಂಡರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದರು. ಮದಲು ನಾನೇ ಈ ಕೆಲಸವನ್ನು ಮಾಡಿ ಮಾದರಿಯಾಗುತ್ತೇನೆ ಎಂದು ಕೂಡ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಪುತ್ರ ಹಾಗು ಮಾಹಿತಿ ತಂತ್ರಜ್ಞಾನ ಸಚಿವರಾದ ಕೆಟಿ ರಾಮರಾವ್, ಐಸ್‍ಕ್ರೀಮ್ ಪಾರ್ಲರ್‍ಗೆ ಹೋಗಿ, ಏಪ್ರಾನ್ ಧರಿಸಿ ಕೆಲಸ ಶುರು ಮಾಡಿಯೇಬಿಟ್ರು.

ಮುಂದಿನ ಒಂದು ವಾರಗಳ ಕಾಲ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ರೀತಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದು ಸಿಎಂ ಕೆಸಿಆರ್ ಇದನ್ನ ಗುಲಾಬಿ ಕೂಲಿ ದಿನಗಳು ಎಂದು ಕರೆದಿದ್ದಾರೆ (ಕೆಸಿಆರ್ ಅವರ ಪಕ್ಷವಾದ ಟಿಆರ್‍ಎಸ್-ತೆಲಂಗಾಣ ರಾಷ್ಟ್ರ ಸಮಿತಿಯ ಬಣ್ಣ ಗುಲಾಬಿ)

ಪಕ್ಷದ ಮುಖಂಡರು ತಮ್ಮ ಎರಡು ದಿನಗಳ ಕೆಲಸದಿಂದ ಗಳಿಸುವ ಹಣವನ್ನ ಏಪ್ರಿಲ್ 21ರಂದು ನಡೆಯಲಿರುವ ಟಿಆರ್‍ಎಸ್‍ನ ಅದ್ಧೂರಿ ವಾರ್ಷಿಕ ಸಮಾವೇಶದ ಖರ್ಚು ವೆಚ್ಛಗಳಿಗೆ ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಪಕ್ಷದ ಸದಸ್ಯತ್ವ ಶುಲ್ಕದಿಂದ 35 ಕೋಟಿ ರೂ ಸಂಗ್ರಹವಾಗಿದ್ದು, ಪಕ್ಷದ ಬ್ಯಾಂಕ್ ಖಾತೆ ಸೇರಿದೆ ಎಂದು ಕೆಸಿಆರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *