2004ರ ಭ್ರಷ್ಟಾಚಾರ ಕೇಸ್ – ಗುಜರಾತ್‌ನ ಮಾಜಿ ಐಎಎಸ್ ಅಧಿಕಾರಿಗೆ 5 ವರ್ಷ ಜೈಲು

ಗಾಂಧಿನಗರ: ಸರ್ಕಾರದ ಖಜಾನೆಗೆ 1.2 ಕೋಟಿ ರೂ. ನಷ್ಟ ಉಂಟುಮಾಡಿ ಕಂಪನಿಯೊಂದಕ್ಕೆ ಭೂಮಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ  ಮಾಜಿ ಐಎಎಸ್ ಅಧಿಕಾರಿಗೆ ಅಹಮದಾಬಾದ್ ಜಿಲ್ಲಾ ನ್ಯಾಯಾಲಯವು 5 ವರ್ಷ ಜೈಲು ಹಾಗೂ 75,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಶಿಕ್ಷಗೆ ಗುರಿಯಾದ ಮಾಜಿ ಐಎಎಸ್ ಅಧಿಕಾರಿಯನ್ನು ಪ್ರದೀಪ್ ಶರ್ಮಾ ಎಂದು ಗುರುತಿಸಲಾಗಿದೆ. ಅವರು 2004ರಲ್ಲಿ ಗುಜರಾತ್‌ನ ಕಚ್ ಜಿಲ್ಲೆಯ ಕಲೆಕ್ಟರ್ ಆಗಿದ್ದಾಗ ಈ ಭ್ರಷ್ಟಾಚಾರ ನಡೆದಿತ್ತು. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ಸೋಜಿತ್ರ ಅವರಿದ್ದ ಏಕಸದಸ್ಯ ಪೀಠ ಶಿಕ್ಷೆಯನ್ನು ಪ್ರಕಟಿಸಿದೆ.

ಮಾಜಿ ಐಎಎಸ್ ತನ್ನ ಪತ್ನಿ ಶ್ಯಾಮಲಾ ಅವರನ್ನು ವ್ಯಾಲ್ಯೂ ಪ್ಯಾಕೇಜಿಂಗ್ ಸಂಸ್ಥೆಯಲ್ಲಿ ಪಾಲುದಾರರನ್ನಾಗಿಸಿ, ಈ ಸಂಸ್ಥೆಗೆ ಕಡಿಮೆ ದರಕ್ಕೆ ಭೂಮಿ ಮಂಜೂರು ಮಾಡಿರುವುದು ಮತ್ತು ಲಂಚ ಪಡೆದ ಪ್ರಕರಣದಲ್ಲಿ ಶರ್ಮಾಗೆ ಶಿಕ್ಷೆಯಾಗಿದೆ ಎಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಆರ್.ಸಿ.ಕೊಡೆಕಾರ್ ಮಾಹಿತಿ ನೀಡಿದ್ದಾರೆ.

ಶರ್ಮಾ ಪ್ರಸ್ತುತ ಮತ್ತೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಭುಜ್ ಜೈಲಿನಲ್ಲಿದ್ದಾರೆ.