KSRTC ಬಸ್‌ನಲ್ಲಿ ಖಾಸಗಿ ವ್ಯಕ್ತಿಯಿಂದ ಟಿಕೆಟ್ ವಿತರಣೆ – ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ರಾಮನಗರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KSRTC Bus) ಖಾಸಗಿ ವ್ಯಕ್ತಿ ಟಿಕೆಟ್ ವಿತರಣೆ ಮಾಡಿರುವ ಘಟನೆ ಕನಕಪುರ-ಹುಣಸನಹಳ್ಳಿ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ.

ಸಮವಸ್ತ್ರ ಇಲ್ಲದ ಖಾಸಗಿ ವ್ಯಕ್ತಿಯೋರ್ವ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಟಿಕೆಟ್ ವಿತರಣೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನಕಪುರ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಕನಕಪುರ- ಹುಣಸನಹಳ್ಳಿ ಮಾರ್ಗದಲ್ಲಿ ತೆರಳುವ ವೇಳೆ ವ್ಯಕ್ತಿಯೋರ್ವ ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿ ಪುರುಷರ ಬಳಿ ದುಡ್ಡು ತೆಗೆದುಕೊಂಡು ಟಿಕೆಟ್ ನೀಡಿಲ್ಲ. ಟಿಕೆಟ್ ಕೊಡಿ ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದರೂ ಟಿಕೆಟ್ ನೀಡದೇ ರಾಜಾರೋಷವಾಗಿ ಪುರುಷರ ಬಳಿ ಹಣ ಪಡೆಯುತ್ತಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹಿರಿಯ ನಟ ಸರಿಗಮ ವಿಜಿ ನಿಧನ

ಪ್ರಯಾಣಿಕನೋರ್ವ ಟಿಕೆಟ್ ಕೊಡಿ, ಚೆಕ್ಕಿಂಗ್ ಅಧಿಕಾರಿಗಳು ಬಂದರೆ ನಮ್ಮ ಕಥೆ ಏನು ಎಂದು ಪ್ರಶ್ನೆ ಮಾಡಿದರೆ, ಅದೆಲ್ಲಾ ನಾನು ನೊಡಿಕೊಳ್ಳುತ್ತೇನೆ. ಅಧಿಕಾರಿಗಳಿಗೆ ತಿಂಗಳು ಮಾಮೂಲಿ ಕೊಡುತ್ತೇವೆ. ಅವರೆಲ್ಲಾ ನಮ್ಮ ಬಸ್ ಚೆಕ್ ಮಾಡಲ್ಲ ಎಂದು ವ್ಯಕ್ತಿ ಹೇಳಿರೋದು ಪ್ರಯಾಣಿಕನ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ. ಬಸ್‌ನಲ್ಲಿ ನಿರ್ವಾಹಕ ಇದ್ದರೂ ಕೂಡ ಖಾಸಗಿ ವ್ಯಕ್ತಿ ಕೈಯಿಂದ ಟಿಕೆಟ್ ವಿತರಣೆ ಮಾಡಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮವಹಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ