ಸತತ 40 ಗಂಟೆ ಡಿಜಿಟಲ್ ಅರೆಸ್ಟ್ – ಕರಾಳ ಅನುಭವ ಹಂಚಿಕೊಂಡ ಖ್ಯಾತ ಯೂಟ್ಯೂಬರ್!

ನವದೆಹಲಿ: ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಎಚ್ಚರಿಕೆಯ ಸಂದೇಶ ನೀಡಿದ ಬಳಿಕ ಡಿಜಿಟಲ್ ಅರೆಸ್ಟ್‌ನಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ನಡುವೆ ಸುಮಾರು 40 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್‌ಗೆ (Digital Aresst) ಒಳಗಾಗಿದ್ದ ಯೂಟ್ಯೂಬರ್ ಅಂಕುಶ್ ಬಹುಗುಣ ತಮ್ಮ ಘಟನೆಯ ಕಹಿ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಂಕುಶ್, ನಾನು ಡಿಜಿಟಲ್ ಅರೆಸ್ಟ್ನಿಂದ ಹಣ, ಮಾನಸಿಕ ಶಾಂತಿ ಹಾಗೂ ನಂಬಿಕೆಯನ್ನು ಕಳೆದುಕೊಂಡಿದ್ದೆ. ಮೂರು ದಿನಗಳ ಕಾಲ ಡಿಜಿಟಲ್ ಅರೆಸ್ಟ್‌ನಲ್ಲಿದ್ದ ಕಾರಣ ಸೋಷಿಯಲ್ ಮೀಡಿಯಾದಿಂದ ನಾಪತ್ತೆಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ:ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ‘ಟಾಕ್ಸಿಕ್‌’ ಚಿತ್ರದ ಬಗ್ಗೆ ಬಿಗ್‌ ನ್ಯೂಸ್‌

ಆ ದಿನ ಜಿಮ್‌ನಿಂದ ಮನೆಗೆ ಮರಳುತ್ತಿದ್ದ ವೇಳೆ ವಿದೇಶಿ ಸಂಖ್ಯೆಯಿದ ಕರೆಯೊಂದು ಬಂತು, ಹೆಚ್ಚು ಯೋಚಿಸದೇ ಆ ಕರೆಯನ್ನು ಸ್ವೀಕರಿಸಿದೆ. ಆಗ ನಿಮ್ಮ ಕೊರಿಯರ್ ಡೆಲಿವರಿ ಕ್ಯಾನ್ಸಲ್ ಆಗಿದೆ. ಸಹಾಯಕ್ಕಾಗಿ ಸೊನ್ನೆಯನ್ನು ಒತ್ತಿ ಎಂದು ಹೇಳಿದರು. ಯೋಚಿಸದೇ ಸೊನ್ನೆಯನ್ನು ಒತ್ತಿದೆ. ಅದು ನನ್ನ ಜೀವನದಲ್ಲಿ ನಾನು ಮಾಡಿದ ಅತಿ ದೊಡ್ಡ ತಪ್ಪು. ಸೊನ್ನೆ ಒತ್ತಿದ ತಕ್ಷಣ ಕರೆ ಗ್ರಾಹಕ ಸೇವಾ ಸಿಬ್ಬಂದಿಗೆ ವರ್ಗಾವಣೆ ಮಾಡಿದರು.

ಬಳಿಕ ನಿಮ್ಮ ಪ್ಯಾಕೇಜ್ ಚೀನಾಕ್ಕೆ ಕಳುಹಿಸುತ್ತಿದ್ದೇನೆ. ಅದನ್ನು ಕಸ್ಟಮ್ಸ್ ಈಗ ವಶಪಡಿಸಿಕೊಂಡಿದೆ. ಆದರೆ ನಾನು ಏನನ್ನೂ ಕಳುಹಿಸಿಲ್ಲ ಎಂದು ಹೇಳಿದೆ. ಆದರೆ ಪ್ಯಾಕೇಜ್‌ನಲ್ಲಿ ನಿಮ್ಮ ಹೆಸರು, ಆಧಾರ್ ಸಂಖ್ಯೆ ಎಲ್ಲವನ್ನೂ ನಮೂದಿಸಲಾಗಿದೆ. ಇದು ಅತ್ಯಂತ ಗಂಭೀರವಾದ ಅಪರಾಧವಾಗಿದ್ದು, ಈಗ ನೀವು ಡಿಜಿಟಲ್ ಬಂಧನಕ್ಕೆ ಒಳಗಾಗುತ್ತೀರಿ. ನಿಮ್ಮ ಹೆಸರಿನಲ್ಲಿ ಈಗಾಗಲೇ ಅರೆಸ್ಟ್ ವಾರೆಂಟ್ ಇದೆ ಎಂದರು.

ಏನನ್ನೂ ತಿಳಿಯದ ಅಂಕುಶ್, ತಕ್ಷಣವೇ ನಾನು ಈ ಕುರಿತು ಪೊಲೀಸರ ಜೊತೆ ಮಾತನಾಡಬೇಕು ಎಂದು ಹೇಳಿದರು. ಆಗ ಪೊಲೀಸ್ ಠಾಣೆಗೆ ಹೋಗುವಷ್ಟು ಸಮಯವಿಲ್ಲ. ನಾವೇ ಪೊಲೀಸ್‌ಗೆ ಕರೆಯನ್ನು ಸಂಪರ್ಕಿಸುತ್ತೇವೆ ಎಂದು ತಿಳಿಸಿದರು. ಅದೇ ಸಮಯದಲ್ಲಿ ವಿಡಿಯೋ ಕರೆಯಲ್ಲಿ ಕಾಣಿಸಿಕೊಂಡ ಪೊಲೀಸ್ ಅಧಿಕಾರಿ ಅಂಕುಶ್ ಅವರನ್ನು ವಿಚಾರಣೆ ನಡೆಸಲು ಪ್ರಾರಂಭಿಸಿದರು. ಈ ವೇಳೆ ಯಾವುದೇ ಕರೆ, ಸಂದೇಶಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅದಾದ 40 ಗಂಟೆಗಳವರೆಗೆ ಅಂಕುಶ್ ಡಿಜಿಟಲ್ ಅರೆಸ್ಟ್ಗೆ ಒಳಗಾಗಿದ್ದರು.

ಅವರು ಎಲ್ಲಾ ರೀತಿಯ ಗ್ಯಾಜೆಟ್‌ಗಳನ್ನು ಸ್ವೀಚ್ ಆಫ್ ಮಾಡಲು ತಿಳಿಸಿದರು. ಯಾರನ್ನಾದರೂ ಸಂಪರ್ಕಿಸಲು ಪ್ರಯತ್ನಿಸಿದರೆ ನಿಮ್ಮನ್ನು ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಸ್ನೇಹಿತರಿಗೆ, ಪೋಷಕರಿಗೆ ಯಾರಿಗೂ ಸಂಪರ್ಕಿಸುವಂತಿರಲಿಲ್ಲ. ಜೊತೆಗೆ ಒತ್ತಾಯಪೂರ್ವಕವಾಗಿ ಹಣ ವರ್ಗಾವಣೆ ಮಾಡುವಂತೆ ತಿಳಿಸಿದರು. ಇದನ್ನು ನೀವು ಮಾಡದಿದ್ದರೆ ನಿಮ್ಮ ಜೀವನ ನಾಶವಾಗುತ್ತದೆ. ನಿಮ್ಮ ಕುಟುಂಬ ಅಪಾಯದಲ್ಲಿ ಸಿಲುಕಿಕೊಳ್ಳುತ್ತದೆ ಎಂದು ಬೆದರಿಕೆಯೊಡ್ಡಿದರು. ಜೊತೆಗೆ ಎಲ್ಲಾ ರೀತಿಯ ಸ್ಕ್ರೀನ್‌ ಶಾಟ್‌ಗಳನ್ನು ಕಳುಹಿಸುವಂತೆ ತಿಳಿಸಿದ್ದರು.

ಬ್ಯಾಂಕಿಗೆ ತೆರಳಿ ಬ್ಯಾಂಕಿನ ವಹಿವಾಟುಗಳನ್ನು ನಿರ್ವಹಿಸುವಂತೆ ತಿಳಿಸಿದರು. ಅದರ ಹೊರತಾಗಿ ನನಗೆ ಬೇರೆ ಆಯ್ಕೆಗಳು ಇರಲಿಲ್ಲ. ಬಳಿಕ ಹೋಟೆಲ್‌ಗೆ ಚೆಕ್ ಇನ್ ಆಗುವಂತೆ ತಿಳಿಸಿದರು. ಈ ಸಮಯದಲ್ಲಿ ನಿಜಕ್ಕೂ ನನಗೇನಾಗುತ್ತಿದೆ? ಎಂದು ತಿಳಿದಿರಲಿಲ್ಲ. ಆ ಸಮಯದಲ್ಲಿ ಅಳುತ್ತಾ ಅವರ ಮುಂದೆ ಬೇಡಿಕೊಂಡೆ. 40 ಗಂಟೆಗಳ ಬಳಿಕ ಕುಟುಂಬ ಹಾಗೂ ಸ್ನೇಹಿತರನ್ನು ಸಂಪರ್ಕಿಸಲು ಸಾಧ್ಯವಾಯಿತು ಎಂದು ಹೇಳಿದರು.ಇದನ್ನೂ ಓದಿ: ಶಿವಮೊಗ್ಗ | ಸಾಗರದ ಹಿರಿಯ ಸಾಹಿತಿ ಡಾ.ನಾ ಡಿಸೋಜ ನಿಧನ