ಉಡುಪಿ: ಶ್ರೀಕೃಷ್ಣ ಮಠದಲ್ಲಿ ಯೇಸುದಾಸ್ ಗಾನಸುಧೆ

ಉಡುಪಿ: ಶ್ರೀಕೃಷ್ಣನ ಅಪ್ಪಟ ಅಭಿಮಾನಿ, ಪದ್ಮವಿಭೂಷಣ ಗಾಯಕ ಕೆ.ಜೆ. ಯೇಸುದಾಸ್ ಉಡುಪಿಯಲ್ಲಿ ತಮ್ಮ ಗಾಯನದ ಮೂಲಕ ಸಾವಿರಾರು ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿರಂತರ ಗಾನಸುಧೆಯನ್ನು ಯೇಸುದಾಸ್ ಹರಿಸಿದರು.

ಮೊದಲು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೇ ಹಾಡಿದ ಯೇಸುದಾಸ್, ನಂತರ ದೇವರ ಕೀರ್ತನೆಗಳನ್ನು ಹಾಡಿದರು. ತಮಗಿಷ್ಟದ ಆರಾಧ್ಯ ದೇವರು ಶ್ರೀಕೃಷ್ಣನ ನಾಮಗಳನ್ನು ಹಾಡಿದರು. ಇದಕ್ಕೂ ಮೊದಲು ಶ್ರೀಕೃಷ್ಣಮಠಕ್ಕೆ ಆಗಮಿಸಿದ ಅವರು ಕಡೆಗೋಲು ಕೃಷ್ಣನ ದರ್ಶನ ಮಾಡಿದರು. ಕುಟುಂಬ ಸಮೇತ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಪ್ರತೀ ವರ್ಷ ಯೇಸುದಾಸ್ ಅವರು ಹುಟ್ಟುಹಬ್ಬದ ಸಂದರ್ಭದಲ್ಲಿ ಕೃಷ್ಣಮಠಕ್ಕೆ ಭೇಟಿಕೊಡುವ ವಾಡಿಕೆ ಇಟ್ಟುಕೊಂಡಿದ್ದಾರೆ. ಸದ್ಯ ಪೇಜಾವರ ಪರ್ಯಾಯ ನಡೆಯುತ್ತಿದ್ದು, ಸ್ವಾಮೀಜಿಗಳ ಮೇಲಿನ ಗೌರವದಿಂದ ಉಡುಪಿಯಲ್ಲಿ ಕಾರ್ಯಕ್ರಮ ನೀಡಲು ಯೇಸುದಾಸ್ ಒಪ್ಪಿದ್ದರು. ಯೇಸುದಾಸ್ ಅವರ ಬಳಗ ಕರ್ನಾಟಕ ಸಂಗೀತ ಅಭಿಮಾನಿಗಳನ್ನು ಕೆಲಕಾಲ ಸಂಗೀತ ಲೋಕದಲ್ಲಿ ತೇಲಾಡಿಸಿತು.

 

Comments

Leave a Reply

Your email address will not be published. Required fields are marked *