ದರೋಡೆಯಂತೆ ಬಿಂಬಿಸಿ ತಾಯಿಯ ಹತ್ಯೆ – ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮಗನಿಂದಲೇ ಕೃತ್ಯ

ನವದೆಹಲಿ: ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಯುವಕನೊಬ್ಬ ತನ್ನ ತಾಯಿಯನ್ನು ಕೊಲೆಗೈದು ದರೋಡೆಯಂತೆ ಬಿಂಬಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಮಹಿಳೆಯನ್ನು ಹತ್ಯೆಗೈದ ಆರೋಪದ ಮೇಲೆ ಆಕೆಯ ಮಗ ಸಾವನ್‌ (22) ಎಂಬಾತನನ್ನು ಬಂಧಿಸಲಾಗಿದೆ. ತಾನು ಇಷ್ಟ ಪಟ್ಟ ಯುವತಿಯನ್ನು ಮದುವೆಯಾಗಲು ತಾಯಿ ನಿರಾಕರಿಸಿದ್ದಕ್ಕೆ ಯುವಕ ಈ ಕೃತ್ಯ ಎಸಗಿದ್ದಾನೆ. ಕೊಲೆಯ ಬಳಿಕ ಆಕೆಯ ಕಿವಿ ಓಲೆಗಳನ್ನು ಸಾವನ್‌ ತೆಗೆದಿದ್ದ. ಈ ಮೂಲಕ ದರೋಡೆಯಂತೆ ಬಿಂಬಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ಬಳಿಕ ದೆಹಲಿ ಪೊಲೀಸರಿಗೆ ಕರೆ ಮಾಡಿ ತನ್ನ ತಾಯಿಯನ್ನು ಕೊಂದು ಆಕೆಯ ಕಿವಿಯೋಲೆಗಳನ್ನು ಕದ್ದಿರುವುದಾಗಿ ತಿಳಿಸಿದ್ದ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ದರೋಡೆ ನಡೆದಿರುವ ಕುರುಹುಗಳು ಪತ್ತೆಯಾಗಿಲ್ಲ. ಮನೆಯಲ್ಲಿ ಇತರ ಬೆಲೆಬಾಳುವ ವಸ್ತುಗಳು ಸಹ ಪತ್ತೆಯಾಗಿದ್ದು, ಸಾವನ್‌ ಮೇಲೆ ಶಂಕೆ ಮೂಡಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಕಾರಣ ಬಯಲಾಗಿದೆ.

ಸಾವನ್‌ನ ಹಿರಿಯ ಸಹೋದರ ಕಪಿಲ್ (27) ಎಂಬಾತನ ವಿವಾಹ ನಿಶ್ಚಯವಾಗಿತ್ತು. ಇದೇ ವೇಳೆ ಸಾವನ್‌ ತನಗೆ ಪರಿಚಯವಿದ್ದ ಯುವತಿಯನ್ನು ಮದುವೆಯಾಗಲು ಬಯಸಿರುವುದಾಗಿ ತನ್ನ ತಾಯಿಗೆ ತಿಳಿಸಿದ್ದಾನೆ. ಆದರೆ, ಆತನ ತಾಯಿ ಗದರಿಸಿ ನಿರಾಕರಿಸಿದ್ದಾಳೆ. ಅಲ್ಲದೇ ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿದರೆ, ಆಸ್ತಿಯಲ್ಲಿ ಯಾವುದೇ ಪಾಲನ್ನು ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾಳೆ. ಇದೇ ಕಾರಣಕ್ಕೆ ಆತ ತಾಯಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.