ಮತ್ತೆ ಕೆಣಕಿದ ಹಿಜ್ಬುಲ್ಲಾ – 250 ರಾಕೆಟ್‌,‌ ಡೆಡ್ಲಿ ಡ್ರೋನ್‌ಗಳಿಂದ ಇಸ್ರೇಲ್‌ ಮೇಲೆ ಭೀಕರ ದಾಳಿ

ಬೈರೂತ್: ಒಂದೆಡೆ ರಷ್ಯಾ-ಉಕ್ರೇನ್‌ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಇಸ್ರೇಲ್‌-ಹಿಜ್ಬುಲ್ಲಾ (Israel – Hezbollah) ನಡುವೆ ಯುದ್ಧದ ಭೀಕರತೆ ವ್ಯಾಪಿಸುತ್ತಿದೆ. ಇತ್ತೀಚೆಗೆ ಇಸ್ರೇಲ್‌ ಬೈರೂತ್‌ ನಗರದ ಮೇಲೆ ನಡೆಸಿದ ದಾಳಿಗೆ ಹಿಜ್ಬುಲ್ಲಾ ಪ್ರತೀಕಾರದ ದಾಳಿ ನಡೆಸಿದೆ. ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸುಮಾರು 250 ರಾಕೆಟ್‌ (Rocket Strike), ಡೆಡ್ಲಿ ಡ್ರೋನ್‌ ಹಾಗೂ ಇತರ ಸ್ಫೋಟಕಗಳಿಂದ ಇಸ್ರೇಲ್‌ ಮೇಲೆ ಅಟ್ಯಾಕ್‌ ಮಾಡಿದೆ. ದಾಳಿಯಲ್ಲಿ ಸಾವು-ನೋವು ಸಂಭವಿಸದಿದ್ದರೂ 7-8 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ಇಸ್ರೇಲ್‌ನ ಐರನ್‌ ಡೋಮ್‌ ಹಿಜ್ಬುಲ್ಲಾ ಹಾರಿಸಿದ ಕೆಲವು ರಾಕೆಟ್‌ಗಳನ್ನ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಇನ್ನುಳಿದ ಕೆಲವು ರಾಕೆಟ್‌ಗಳು ಟೆಲ್‌ ಅವೀವ್‌ನಲ್ಲಿ (Tel Aviv) ಭಾರಿ ಕಟ್ಟಡಗಳನ್ನು ಧ್ವಂಸ ಮಾಡಿವೆ ಎನ್ನಲಾಗಿದೆ. ಇದನ್ನೂ ಓದಿ: 3ನೇ ಮಹಾಯುದ್ಧ ಎದುರಿಸೋಕೆ ಸಿದ್ಧರಾಗಿ.. ಆಹಾರ, ಔಷಧ ಸಂಗ್ರಹಿಸಿ ಇಟ್ಕೊಳ್ಳಿ – ಜನರಿಗೆ ಸ್ವೀಡನ್, ಫಿನ್‌ಲ್ಯಾಂಡ್ ಕರೆ

ಮತ್ತೊಂದೆಡೆ ದಕ್ಷಿಣ ಇಸ್ರೇಲ್‌ನ ಅಶ್ಡೋಡ್ ನೌಕಾ ನೆಲೆ, ಗ್ಲಿಲೋಟ್ ಸೇನಾ ಗುಪ್ತಚರ ನೆಲೆ ಹಾಗೂ ಟೆಲ್‌ ಅವಿವ್‌ನ ಮಿಲಿಟರಿ ಕ್ಯಾಂಪ್‌ಗಳ ಮೇಲೆ ಇದೇ ಮೊದಲ ಬಾರಿಗೆ ಡ್ರೋಣ್‌ ಬಳಿ ವೈಮಾನಿಕ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಉಗ್ರರ ಗುಂಪು ಹೇಳಿಕೊಂಡಿದೆ. ಈ ಬೆನ್ನಲ್ಲೇ ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ಈವರೆಗೆ ನಡೆಸಿದ ದಾಳಿಗಳ ಪೈಕಿ ಅತಿದೊಡ್ಡ ದಾಳಿ ಎಂದು ಇಸ್ರೇಲಿ ಮಿಲಿಟರಿ ಪಡೆಗಳು ಖಚಿತಪಡಿಸಿವೆ. ಇದನ್ನೂ ಓದಿ: ಭಾರತದಲ್ಲಿ ಒಂದೇ ದಿನ 64 ಕೋಟಿ ಮತ ಎಣಿಕೆ – ಮಸ್ಕ್‌ ರಿಯಾಕ್ಷನ್‌ ಏನು?

4,000 ಗಡಿ ಸಮೀಪಿಸಿದ ಸಾವಿನ ಸಂಖ್ಯೆ:
2023ರ ಅಕ್ಟೋಬರ್‌ ನಿಂದ ಈವರೆಗೆ ಇಸ್ರೇಲ್‌ – ಲೆಬನಾನ್‌ ನಡುವಿನ ಯುದ್ಧದಲ್ಲಿ ಕನಿಷ್ಠ 3,754 ಜನ ಮೃತಪಟ್ಟಿದ್ದಾರೆ. ಇಸ್ರೇಲಿ ಭಾಗದಲ್ಲಿ, ಕನಿಷ್ಠ 82 ಸೈನಿಕರು ಮತ್ತು 47 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಮೂಲ ಸೌಕರ್ಯಗಳ ಮೇಲಿನ ಹಾನಿಯೂ ದೊಡ್ಡದಾಗಿಯೇ ನಡೆದಿದೆ. ಇದನ್ನೂ ಓದಿ: ಭಾರತದ ಒತ್ತಡಕ್ಕೆ ಮಣಿದ ಕೆನಡಾ – ಮೋದಿ ಹೆಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಯನ್ನು ತಿರಸ್ಕರಿಸಿದ ಸರ್ಕಾರ

ಮತ್ತೆ ಉದ್ವಿಗ್ನಗೊಂಡಿದ್ದೇಕೆ?
ಇತ್ತೀಚೆಗೆ ಹಿಜ್ಬುಲ್ಲಾ ಉಗ್ರರ ಗುಂಪು ಇಸ್ರೇಲ್‌ನ ಹೈಫಾ ನಗರವನ್ನ (Haifa City) ಗುರಿಯಾಗಿಸಿಕೊಂಡು 150 ರಾಕೆಟ್‌ಗಳಿಂದ ದಾಳಿ ನಡೆಸಿತ್ತು. ಹಿಜ್ಬುಲ್ಲಾ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ಅನೇಕ ನಾಗರಿಕರು ಗಾಯಗೊಂಡಿದ್ದರು. ಇದರಿಂದ ಕೆರಳಿದ ಇಸ್ರೇಲ್‌ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತ್ತು. ಆ ಬಳಿಕ ಸತತ 2 ಬಾರಿ ಕ್ಷಿಪಣಿ ದಾಳಿ ನಡೆಸಿ, 20ಕ್ಕೂ ಹೆಚ್ಚು ಮಂದಿಯನ್ನು ಕೊಂದಿತ್ತು.