ರಷ್ಯಾ ಮೇಲೆ ಕ್ಷಿಪಣಿ ದಾಳಿಗೆ ಅಮೆರಿಕ ಒಪ್ಪಿಗೆ – ಉಕ್ರೇನ್‌ಗೆ ಜೋ ಬೈಡನ್‌ ಬಲ

ವಾಷಿಂಗ್ಟನ್: ರಷ್ಯಾ-ಉಕ್ರೇನ್‌ (Russia- Ukraine) ಯುದ್ಧವನ್ನು ನಿಲ್ಲಿಸುತ್ತೇನೆ ಎಂದು ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದರೂ ಈಗ ಯದ್ಧ ಮತ್ತಷ್ಟು ತೀವ್ರಗೊಳ್ಳುತ್ತಾ ಎಂಬ ಪ್ರಶ್ನೆ ಈಗ ಸೃಷ್ಟಿಯಾಗಿದೆ.

ಇನ್ನೆರಡು ತಿಂಗಳು ಅಧಿಕಾರದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ (Joe Biden) ಅವರು ರಷ್ಯಾ ವಿರುದ್ಧ ಯುದ್ಧ ಮಾಡುವಂತೆ ಉಕ್ರೇನ್‌ಗೆ ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಅಮೆರಿಕ ಉಕ್ರೇನ್‌ಗೆ ದೂರ ಸಾಗಬಲ್ಲ ಕ್ಷಿಪಣಿಯನ್ನು ನೀಡಿತ್ತು. ಆದರೆ ಈ ಕ್ಷಿಪಣಿಯ ಬಳಕೆಗೆ ನಿರ್ಬಂಧ ಹೇರಿತ್ತು. ಎರಡು ತಿಂಗಳು ಅಧಿಕಾರದಲ್ಲಿರುವ ಜೋ ಬೈಡೆನ್‌ ಸರ್ಕಾರ ಕೊನೆ ಗಳಿಗೆಯಲ್ಲಿ ಈ ನಿರ್ಬಂಧವನ್ನು ತೆಗೆದುಹಾಕಿದೆ. ಇದನ್ನೂ ಓದಿ: ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ದಾಳಿಯನ್ನು ನಡೆಸಲು ಯೋಜಿಸಿದೆ ಎಂದು ವರದಿಯಾಗಿದೆ. ಉತ್ತರ ಕೊರಿಯಾದ ಪಡೆಗಳನ್ನು ರಷ್ಯಾ ನಿಯೋಜಿಸಿದ ಬೆನ್ನಲ್ಲೇ ಈ ಮಹತ್ವದ ವಿದ್ಯಮಾನ ನಡೆದಿದೆ.

ಮೂಲಗಳ ಪ್ರಕಾರ 190 ಮೈಲುಗಳವರೆಗೆ (306 ಕಿಮೀ) ವ್ಯಾಪ್ತಿಯನ್ನು ಹೊಂದಿರುವ ಎಟಿಎಸಿಎಂಎಸ್ ರಾಕೆಟ್‌ಗಳನ್ನು ಬಳಸಿಕೊಂಡು ಮೊದಲ ದಾಳಿಯನ್ನು ಉಕ್ರೇನ್‌ ನಡೆಸುವ ಸಾಧ್ಯತೆಯಿದೆ.

ಡೊನಾಲ್ಡ್‌ ಟ್ರಂಪ್‌ ಅವರು ಈಗಾಗಲೇ ಉಕ್ರೇನ್‌ಗೆ ನೀಡುತ್ತಿರುವ ಸೇನಾ ನೆರವನ್ನು ನಿಲ್ಲಿಸುವುದಾಗಿ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.

120 ಮಂದಿ ಬಲಿ: ಉಕ್ರೇನ್‌ನ ಇಂಧನ ಮೂಲಭೂತ ಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ಮೃತಪಟ್ಟದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.