ಪತಿಯ ಮೇಲೆ ಪಡಿತರ ಅಕ್ರಮ ಕೇಸ್‌ ದಾಖಲಾದ್ರೂ ಈಗ ಪತ್ನಿಗೆ ಸಿಕ್ತು ರೇಷನ್‌ ಅಂಗಡಿ ಲೈಸೆನ್ಸ್‌!

– ಹಲವು ಠಾಣೆಗಳಲ್ಲಿ ತೇಲಿ ಮೇಲೆ ಹಲವು ಎಫ್‌ಐಆರ್‌ ದಾಖಲು
– ಅಕ್ರಮ ಗೊತ್ತಿದ್ದರೂ ಪತ್ನಿಗೆ ಲೈಸೆನ್ಸ್‌ ಸಿಕ್ಕಿದ್ದು ಹೇಗೆ?

ಬಾಗಲಕೋಟೆ: ‌ಜಿಲ್ಲೆಯಲ್ಲಿ ಪಡಿತರ (Ration), ಅಕ್ಷರದಾಸೋಹ ಯೋಜನೆ ಹಾಗೂ ಅಂಗನವಾಡಿಗಳಿಗೆ ಬರುವ ಆಹಾರ (Food) ಧಾನ್ಯಗಳ ಅಕ್ರಮ ದಂಧೆ ಎಗ್ಗಿಲ್ಲದೇ ಸಾಗುತ್ತಿದೆ. ಅಕ್ರಮ ದಂಧೆ ನಡೆಯುತ್ತಿದ್ದರೂ ಪೊಲೀಸರು (Police) ಕೇವಲ ಎಫ್‌ಐಆರ್‌ (FIR) ಹಾಕಿ ಬಿಡುತ್ತಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ರಾಘವೇಂದ್ರ ತೇಲಿ ಕಳೆದ ಹಲವು ವರ್ಷಗಳಿಂದ ಆಹಾರಧಾನ್ಯ ಅಕ್ರಮ ದಂಧೆ ಮಾಡುತ್ತಾ ಬಂದಿದ್ದಾನೆ. ಈತನ ಮೇಲೆ ಹಲವು ಎಫ್‌ಐಆರ್‌ ದಾಖಲಾಗಿದ್ದರೂ ತನ್ನ ಪತ್ನಿ ಹೆಸರಲ್ಲಿ ಪುನಃ ರೇಷನ್ ಅಂಗಡಿ ಆರಂಭಿಸಿ ಅಕ್ರಮ ದಂಧೆ ಶುರುವಿಟ್ಟುಕೊಂಡಿದ್ದಾನೆ ಎಂದು ಸ್ಥಳೀಯ ಜನರು ಗಂಭೀರ ಆರೋಪ ಮಾಡಿದ್ದಾರೆ.

ಏನೇನು ಆರೋಪವಿದೆ?
ಪಡಿತರ ಅಕ್ಕಿ,  ಅಕ್ಷರದಾಸೋಹ ಯೋಜನೆಯಡಿ ಬರುವ ಆಹಾರ ಧಾನ್ಯ, ಅಂಗನವಾಡಿಗೆ ಬರುವ ಮಕ್ಕಳ ಆಹಾರ ಧಾನ್ಯಗಳನ್ನು  ಅಕ್ರಮವಾಗಿ ಶೇಖರಣೆ ಮಾಡಿ ನೆರೆಯ ಮಹಾರಾಷ್ಟ್ರಕ್ಕೆ ಕಳ್ಳ ಸಾಗಾಣಿಕೆ ಮಾಡಿದ ಆರೋಪ ರಾಘವೇಂದ್ರ ತೇಲಿ ಮೇಲಿದೆ.

ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಕಳ್ಳ ಸಾಗಾಣಿಕೆ ಮಾಡಿದ ಪ್ರಕರಣ ದಾಖಲಾಗಿದ್ದರೂ ಇಲ್ಲಿಯವರೆಗೆ ಪೊಲೀಸರು ಬಂಧಿಸಿಲ್ಲ ಎಂಬ ಆರೋಪ ಸ್ಥಳೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಬರೀ ಅಕ್ರಮ ಸಾಗಣೆ ವಾಹನ ಚಾಲಕರ ಮೇಲೆ ಕೇಸ್ ದಾಖಲಿಸಿ ಸುಮ್ಮನಾಗುತ್ತಿದ್ದಾರೆ. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಬಾಗಲಕೋಟೆಯಲ್ಲಿ ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು

ರಾಘವೇಂದ್ರ ತೇಲಿ ವಿವಿಧ ಉದ್ದೇಶಗಳ‌ ಸಹಕಾರಿ ಸಂಘದ ಹೆಸರಲ್ಲಿ ಪಡಿತರ ಅಂಗಡಿ ನಡೆಸುತ್ತಿದ್ದ. ಈತನ ಅಕ್ರಮಗಳು ಬೆಳಕಿಗೆ ಬಂದ ನಂತರ ಆತನ ಹೆಸರಿನಲ್ಲಿದ್ದ ರೇಷನ್ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲೂ ತೇಲಿ ವಿರುದ್ಧ ಅಕ್ರಮ ಅಕ್ಕಿ ಸಾಗಾಣಿಕೆ ಕೇಸ್ ದಾಖಲಾಗಿತ್ತು,

ರಾಘವೇಂದ್ರ ತೇಲಿ ಮೇಲೆ ಕಳ್ಳಸಾಗಣೆ ಮಾಡಿದ ಪ್ರಕರಣ ದಾಖಲಾಗಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಯಾಕೆ? ಈತನ ಅಕ್ರಮ ಗೊತ್ತಿದ್ದರೂ ಪತ್ನಿಗೆ ಲೈಸೆನ್ಸ್‌ ಸಿಕ್ಕಿದ್ದು ಹೇಗೆ?  ಅಕ್ರಮದಲ್ಲಿ ಅಧಿಕಾರಿಗಳು, ಪೊಲೀಸರು ಭಾಗಿಯಾಗಿದ್ದಾರಾ ಎಂದು ಪ್ರಶ್ನಿಸಿ ಸ್ಥಳಿಯ ಜನರು ಪೊಲೀಸ್ ಇಲಾಖೆ ವಿರುದ್ಧವೇ ಆಕ್ರೋಶ ಹೊರ ಹಾಕುತ್ತಿದ್ದಾರೆ.