ಹೈಕೋರ್ಟ್‌ ತೀರ್ಪನ್ನು ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದಿದ್ದ ಸಚಿವರಿಗೆ ಸಂಕಷ್ಟ – ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಸೂಚನೆ

ಬೆಂಗಳೂರು: ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್‌ (Karnataka Highcourt) ನೀಡಿದ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಾಪಾಲರು ಸೂಚನೆ ನೀಡಿದ್ದಾರೆ.

ಸಚಿವ ಜಮೀರ್ ಅಹಮ್ಮದ್ ಹೇಳಿಕೆ ಸಂಬಂಧ ಅಡ್ವೋಕೇಟ್ ಜನರಲ್‌ಗೆ ರಾಜ್ಯಪಾಲರು ಪತ್ರ ಬರೆದಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಿನ್ನೆ ಬಂದಿರೋದು ಪೊಲಿಟಿಕಲ್‌ ಜಡ್ಜ್‌ಮೆಂಟ್‌: ಜಮೀರ್‌ ಅಹ್ಮದ್‌

ಕಳೆದ ಸೆಪ್ಟೆಂಬರ್‌ 24ರಂದು ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್‌ (High Court) ಗ್ರೀನ್‌ ಸಿಗ್ನಲ್‌ ನೀಡಿತ್ತು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್‌ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿತ್ತು. ಕಳೆದ ಸೆಪ್ಟೆಂಬರ್‌ 25ರಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಜಮೀರ್‌ ʻನಾನು ಬಿಡಿಸಿ ಹೇಳುವಂತಿಲ್ಲ. ನಿನ್ನೆ ಬಂದಿರುವುದು ಎಲ್ಲೋ ಒಂದು ಕಡೆ ಪೊಲಿಟಿಕಲ್‌ ಜಡ್ಜ್‌ಮೆಂಟ್‌ (Political Judgement). ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದರು. ಮರುದಿನ ತಮ್ಮ ಹೇಳಿಕೆ ಕುರಿತು ಕ್ಷಮೆ ಕೋರಿದ್ದರು. ಇದನ್ನೂ ಓದಿ: ಬಾಯಿ ತಪ್ಪಿನಿಂದ ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದಿದ್ದೆ: ಕ್ಷಮೆ ಕೇಳಿದ ಜಮೀರ್

ಜಮೀರ್‌ ಅವರ ಈ ಹೇಳಿಕೆ ಖಂಡಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ರಾಜ್ಯಪಾಲರಿಗೆ ದೂರು ನೀಡಿದ್ದರು. ನ್ಯಾಯಾಂಗ ನಿಂದನೆಯ ಜೊತೆಗೆ ಸಚಿವ ಜಮೀರ್ ಅಹಮದ್ ವಿರುದ್ಧ ಕ್ರಿಮಿನಲ್ ಪ್ರೊಸಿಡಿಂಗ್‌ಗೆ ರಾಜ್ಯಪಾಲರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಅಡ್ವೋಕೇಟ್ ಜನರಲ್‌ಗೆ ಪತ್ರ ಬರೆದಿರುವ ರಾಜ್ಯಪಾಲರು ಸಚಿವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಿ: ಎಜಿಗೆ ಟಿ ಜೆ ಅಬ್ರಹಾಂ ದೂರು