ಪೆರೋಲ್ ಮೇಲೆ ಹೊರಬಂದಿದ್ದ ಕೊಲೆ ಅಪರಾಧಿಗೆ ಗುಂಡಿಕ್ಕಿ ಹತ್ಯೆ – ಗ್ಯಾಂಗ್‌ಸ್ಟರ್‌ ಅರ್ಷದೀಪ್ ಸಹಚರರ ಬಂಧನ

ಭೋಪಾಲ್‌: ಪೆರೋಲ್ ಮೇಲೆ ಜೈಲಿಂದ ಹೊರಬಂದಿದ್ದ ಕೊಲೆ ಅಪರಾಧಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ನಡೆದಿದೆ.

ಗುಂಡಿನ ದಾಳಿಯಲ್ಲಿ ಬಲಿಯಾದ ವ್ಯಕ್ತಿಯನ್ನು ಜಸ್ವಂತ್ ಸಿಂಗ್ ಗಿಲ್ (45) ಎಂದು ಗುರುತಿಸಲಾಗಿದೆ. ಆತ 2016 ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಇತ್ತೀಚೆಗೆ ಪೆರೋಲ್‌ ಮೇಲೆ ಜೈಲಿಂದ ಆತ ಹೊರಬಂದಿದ್ದ. ಆತನ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಿಲ್ ತನ್ನ ಮನೆಯ ಹೊರಗೆ ಇಬ್ಬರು ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದ. ಆಗ ಇಬ್ಬರು ಬೈಕ್‌ನಲ್ಲಿ ಬಂದಿದ್ದಾರೆ. ಈ ವೇಳೆ ಅದರಲ್ಲಿ ಒಬ್ಬ ಗಿಲ್‌ಗೆ ಗುಂಡಿಕ್ಕಿ ಕೊಂದಿದ್ದಾನೆ. ಗಿಲ್ ಸತ್ತಿದ್ದಾನೆ ಎಂದು ಖಚಿತವಾಗುವವರೆಗೆ ಶೂಟರ್ ಗುಂಡು ಹಾರಿಸುತ್ತಲೇ ಇದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಬಂಧ ಕೆನಡಾ ಮೂಲದ ದರೋಡೆಕೋರ ಅರ್ಷದೀಪ್ ಸಿಂಗ್ ದಲ್ಲಾನ (Arshdeep Singh Dalla) ಇಬ್ಬರು ಸಹಚರರನ್ನು ಪಂಜಾಬ್‌ನ ಮೊಹಾಲಿ ಜಿಲ್ಲೆಯ ಖರಾರ್‌ನಲ್ಲಿ ಬಂಧಿಸಲಾಗಿದೆ. ತನಿಖೆ ವೇಳೆ ಅರ್ಷದೀಪ್ ಸಿಂಗ್ ದಲ್ಲಾ ಎರಡು ಕೊಲೆಗಳನ್ನು ನಡೆಸುವಂತೆ ಆರೋಪಿಗಳಿಗೆ ಸೂಚನೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.