ಯುವತಿಯ ಖಾಸಗಿ ಕ್ಷಣ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಪ್ರಿಯಕರ, ಅಪ್ರಾಪ್ತ ಸೇರಿದಂತೆ 6 ಮಂದಿಯಿಂದ ಗ್ಯಾಂಗ್‌ ರೇಪ್‌

ಭವನೇಶ್ವರ್: ಒಡಿಶಾದ (Odisha) ಕಟಕ್ ಜಿಲ್ಲೆಯಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಹಲವು ಬಾರಿ‌ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಪ್ರಾಪ್ತ ಸೇರಿದಂತೆ ಆರು ಜನರನ್ನು ಪೊಲೀಸರು (Police) ಬಂಧಿಸಿದ್ದಾರೆ.

ಹುಟ್ಟುಹಬ್ಬವನ್ನು ಆಚರಿಸಲು ದಸರಾ (Dasara) ಹಬ್ಬದ ಸಂದರ್ಭದಲ್ಲಿ ಕಟಕ್‌ನ ಪುರಿಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆಫೆಗೆ ಯುವತಿ ಹೋಗಿದ್ದಳು. ಈ ವೇಳೆ ಆಕೆಯ ಪ್ರಿಯಕರ, ಕೆಫೆ ಮಾಲೀಕರ ಸಹಾಯದಿಂದ ಖಾಸಗಿ ಕ್ಷಣಗಳನ್ನು ತನ್ನ ಫೋನ್‌ನಲ್ಲಿ ವಿಡಿಯೋ ಮಾಡಿಸಿದ್ದಾನೆ. ಆ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ ಪ್ರಿಯಕರ ಸೇರಿದಂತೆ ಆರೋಪಿಗಳು ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಪೊಲೀಸರು ಆರೋಪಿಗಳ ಮೊಬೈಲ್ ಫೋನ್‌ ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಭುವನೇಶ್ವರದಲ್ಲಿರುವ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಯುವತಿಯ ಪ್ರಿಯಕರ, ಕೆಫೆ ಮಾಲೀಕ, ಓರ್ವ ಅಪ್ರಾಪ್ತ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಬಿಎನ್‌ಎಸ್, ಐಟಿ ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.