ತಲೆಮರೆಸಿಕೊಳ್ಳಲು 8 ಮೊಬೈಲ್‌, 20 ಸಿಮ್‌, 6 ನಕಲಿ ಹೆಸರು – ಆರೋಪಿಯನ್ನು 1,600 ಕಿ.ಮೀ ಬೆನ್ನಟ್ಟಿ ಹಿಡಿದ ಪೊಲೀಸರು!

ನವದೆಹಲಿ: ಈ ವರ್ಷ ಮೇನಲ್ಲಿ ದಕ್ಷಿಣ ದೆಹಲಿಯ (Delhi) ಜಂಗ್‌ಪುರದಲ್ಲಿ ನಡೆದ ಖ್ಯಾತ ವೈದ್ಯರೊಬ್ಬರ ಕೊಲೆ ಪ್ರಕರಣದ ಮಾಸ್ಟರ್‌ಮೈಂಡ್‌ ಪೊಲೀಸರಿಂದ (Police) ತಪ್ಪಿಸಿಕೊಳ್ಳಲು ಎಂಟು ಮೊಬೈಲ್‌ ಫೋನ್‌ ಹಾಗೂ 20 ಸಿಮ್‌ ಕಾರ್ಡ್‌ಗಳನ್ನು ಬದಲಾಯಿಸಿದ್ದ. ಅಲ್ಲದೇ ಸುಮಾರು 6 ನಕಲಿ ಹೆಸರುಗಳನ್ನು ಬಳಸಿಕೊಂಡಿದ್ದ. ಆತನನ್ನು ಅಂತಿಮವಾಗಿ ಭಾರತ-ನೇಪಾಳ (Nepal ) ಗಡಿಯಲ್ಲಿ ಸುಮಾರು 1,600 ಕಿ.ಮೀ ವರೆಗೂ ಚೇಸ್‌ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಷ್ಣುಸ್ವರೂಪ್ ಶಾಹಿ ಎಂದು ಗುರುತಿಸಲಾಗಿದೆ. ಅವನು ಹೋದಲ್ಲೆಲ್ಲಾ ನಕಲಿ ಗುರುತಿನ ಚೀಟಿ ಹಾಗೂ ನಕಲಿ ಹೆಸರನ್ನು ಬಳಸುತ್ತಿದ್ದ. ವಿಷ್ಣು ಸ್ವರೂಪ್ ಶಾಹಿ, ಶಕ್ತಿ ಸಾಯಿ, ಸತ್ಯ ಸಾಯಿ, ಸೂರ್ಯ ಪ್ರಕಾಶ್ ಶಾಹಿ, ಗಗನ್ ಓಲಿ ಮತ್ತು ಕೃಷ್ಣ ಶಾಹಿ ಎಂಬ ಹೆಸರಿನ ಗುರುತಿನ ಚೀಟಿಗಳನ್ನು ಆತ ಹೊಂದಿದ್ದ. ಆತನನ್ನು ಬಂಧಿಸುವಾಗ ಗಗನ್ ಒಲಿ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಹಾಗೂ ಆತನ ಸಹಚರರು ವೈದ್ಯ ಯೋಗೀಶ್ ಚಂದ್ರ ಪಾಲ್ (63) ಅವರನ್ನು ಜಂಗ್‌ಪುರದ ಅವರ ಮನೆಯಲ್ಲಿ ಈ ವರ್ಷ ಮೇ ತಿಂಗಳಲ್ಲಿ ಹತ್ಯೆಗೈದಿದ್ದರು. ಕೊಲೆಗೂ ಮುನ್ನ ಆರೋಪಿಗಳು ಮನೆಯನ್ನು ಲೂಟಿ ಮಾಡಿದ್ದರು ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಸಂಜಯ್ ಸೇನ್ ಹೇಳಿದ್ದಾರೆ.

ಮನೆಯ ಸುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಹಲವು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದರು. ತನಿಖೆ ಸಂದರ್ಭದಲ್ಲಿ ಕೆಲವರನ್ನು ಬಂಧಿಸಲಾಗಿತ್ತು. ಪ್ರಕರಣದ ಮಾಸ್ಟರ್‌ ಮೈಂಡ್‌ ಯಾರು ಎಂದು ತನಿಖೆಗೆ ಇಳಿದಾಗ ಈತನ ಬಗ್ಗೆ ಮಾಹಿತಿ ಸಿಕ್ಕಿತ್ತು. ಈತ ಡೆಹ್ರಾಡೂನ್‌ನಲ್ಲಿ ತಲೆ ಮರೆಸಿಕೊಂಡಿದ್ದ, ಪೊಲೀಸರು ಅಲ್ಲಿಗೆ ತೆರಳುವ ಮುನ್ನ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲಿಂದ ವಿಷ್ಣುಸ್ವರೂಪ್ ಶಾಹಿ ಭಾರತ-ನೇಪಾಳ ಗಡಿಯತ್ತ ಧಾವಿಸುತ್ತಿದ್ದಂತೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮಾಹಿತಿ ಸಿಕ್ಕಿತ್ತು. ಪೊಲೀಸರ ತಂಡವು ತಂಡವು 24 ಗಂಟೆಗಳ ಕಾಲ 1,600 ಕಿಮೀ ಆತನ ಬೆನ್ನಟ್ಟಿ, ಶನಿವಾರ ಬೆಳಗ್ಗೆ ಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು 2018 ಮತ್ತು 2020ರಲ್ಲಿ ಪೊಲೀಸರು ಕೆಲವು ಪ್ರಕರಣ ಸಂಬಂಧ ಬಂಧಿಸಿದ್ದರು.