ದನದ ಕೊಟ್ಟಿಗೆ ಶುಚಿಗೊಳಿಸಿ ಅಲ್ಲಿ ಮಲಗಿದರೆ ಕ್ಯಾನ್ಸರ್‌ ರೋಗ ವಾಸಿಯಾಗುತ್ತೆ: ಉತ್ತರ ಪ್ರದೇಶ ಸಚಿವ

– ಮಕ್ಕಳ ಹುಟ್ಟುಹಬ್ಬವನ್ನ ಗೋಶಾಲೆಗಳಲ್ಲಿ ಆಚರಿಸಿ ಎಂದು ಸಚಿವರ ಕರೆ
– ಹಸುಗಳನ್ನ ಸಾಕಿದರೆ ರಕ್ತದೊತ್ತಡ ಸಮಸ್ಯೆ ನಿಯಂತ್ರಿಸಬಹುದು

ಲಕ್ನೋ: ಕ್ಯಾನ್ಸರ್‌ ರೋಗಿಗಳು ದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಅಲ್ಲಿ ಮಲಗುವುದರಿಂದ ಕ್ಯಾನ್ಸರ್‌ ರೋಗ ಗುಣಮುಖವಾಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿಕೆ ನೀಡಿದ್ದಾರೆ.

ಕಬ್ಬು ಬೆಳೆ ಅಭಿವೃದ್ಧಿಯ ಸಚಿವ ಗಂಗ್ವಾರ್, ಭಾನುವಾರ ತಮ್ಮ ಕ್ಷೇತ್ರವಾದ ಪಿಲಿಭಿತ್‌ನ ಪಕಾಡಿಯಾ ನೌಗಾವಾನ್‌ನಲ್ಲಿ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದರು. ಹಸುಗಳಿಗೆ ಮೇವು ನೀಡಿ ಸಾಕುವುದರಿಂದ ರಕ್ತದೊತ್ತಡ ಸಮಸ್ಯೆಯು ಕೇವಲ 10 ದಿನಗಳಲ್ಲಿ ಅರ್ಧದಷ್ಟು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸುವಂತೆ ಸಚಿವರು ಇದೇ ವೇಳೆ ಒತ್ತಾಯಿಸಿದ್ದಾರೆ.

ಕ್ಯಾನ್ಸರ್ ರೋಗಿಯು ದನದ ಕೊಟ್ಟಿಗೆಯನ್ನು ಶುಚಿಗೊಳಿಸಿ, ಅಲ್ಲಿ ಮಲಗಿದರೆ ಕ್ಯಾನ್ಸರ್ ಕೂಡ ವಾಸಿಯಾಗುತ್ತದೆ. ನೀವು ಹಸುವಿನ ಬೆರಣಿ ಸುಟ್ಟರೆ, ಸೊಳ್ಳೆಗಳ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ಆದ್ದರಿಂದ ಪಶುಸಂಗೋಪನೆ ಎಲ್ಲವೂ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ.