ಉತ್ತರಾಖಂಡ್‍ನಲ್ಲಿಂದು ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣವಚನ

– ಉತ್ತರಪ್ರದೇಶದ ಸಾರಥಿ ಯಾರು? ಇಂದು ನಿರ್ಧಾರ

ನವದೆಹಲಿ: ಉತ್ತರಾಖಂಡ್‍ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರದ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ಮಾಜಿ ಸಂಘ ಪ್ರಚಾರಕರಾಗಿರುವ ರಾವತ್, ದೋಯ್‍ವಾಲಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದಾರೆ.

ಬಿಜೆಪಿ ಪ್ರಚಂಡ ಜಯ ಸಾಧಿಸಿರುವ ಉತ್ತರಪ್ರದೇಶದಲ್ಲಿ ಸರ್ಕಾರದ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಮನೋಜ್ ಸಿನ್ಹಾ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ ಎಂದು ಸಿನ್ಹಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಿಎಂ ಯಾರಾಗ್ತಾರೆ ಎಂಬ ಬಗ್ಗೆ ಇವತ್ತು ಅಧಿಕೃತ ಘೋಷಣೆ ಹೊರಬೀಳಲಿದೆ.

ಮಾರ್ಚ್ 11ರಂದು ಫಲಿತಾಂಶ ಬಂದಿತ್ತಾದರೂ ಯಾರನ್ನು ಸಿಎಂ ಮಾಡಬೇಕೆಂಬ ಲೆಕ್ಕಾಚಾರದಲ್ಲೇ ಬಿಜೆಪಿ ತೊಡಗಿಕೊಂಡಿತ್ತು. ಇಂದು ಲಕ್ನೋದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಇದರಲ್ಲಿ ಮನೋಜ್ ಸಿನ್ಹಾರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಭಾನುವಾರ ಮಧ್ಯಾಹ್ನ 2.15ಕ್ಕೆ ಲಕ್ನೋದಲ್ಲಿರುವ ಉಪವನದಲ್ಲಿ ರಾಜ್ಯಪಾಲ ರಾಮ್‍ನಾಯ್ಕ್ ನೂತನ ಸಿಎಂ ಮತ್ತು ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಾಕ್ಷಿಯಾಗಲಿದ್ದಾರೆ.

                                

ಸದ್ಯ ಸಿನ್ಹಾ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ ಮತ್ತು ದೂರಸಂಪರ್ಕ ಖಾತೆಯ ಸ್ವತಂತ್ರ ಸಚಿವರಾಗಿದ್ದಾರೆ. ಗಾಜಿಪುರ್ ಸಂಸದರಾಗಿರುವ ಮನೋಜ್ ಸಿನ್ಹಾ ಭೂಮಿಹಾರ್ ಸಮುದಾಯಕ್ಕೆ ಸೇರಿದವರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿರುವ ಸಿನ್ಹಾ 1959ರಲ್ಲಿ ಗಾಜಿಯಪುರದ ಮೋಹನ್‍ಪುರದಲ್ಲಿ ಜನಿಸಿದ್ದರು. 1996ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದ ಇವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಸಿನ್ಹಾ ಪ್ರಾಮಾಣಿಕ, ದಕ್ಷ ಸಂಸದರಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಹೊಂದಿದ್ದಾರೆ.

Comments

Leave a Reply

Your email address will not be published. Required fields are marked *