ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ – ಸುತ್ತೂರು ಮಠಕ್ಕೆ ರಾಜಕಾರಣಿಗಳ ದಂಡು

ಮೈಸೂರು: ನಂಜನಗೂಡು, ಗುಂಡ್ಲುಪೇಟೆ ಚುನಾವಣೆ ಪ್ರಚಾರಕ್ಕೆಂದು ಮೈಸೂರಿಗೆ ಹೋದವರೆಲ್ಲಾ ಸುತ್ತೂರು ಮಠಕ್ಕೆ ಹೋಗಿ ಬರ್ತಿದ್ದಾರೆ.

ಸುತ್ತೂರು ಮಠವು ಹಳೆ ಮೈಸೂರು ಭಾಗದಲ್ಲಿ ಅತ್ಯಂತ ಪ್ರಭಾವಿ ಮಠ. ಮುಂಬರುವ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸುತ್ತೂರು ಮಠವೇ ನಿರ್ಣಾಯಕ. ಅದಕ್ಕಾಗಿಯೇ ಉಪ ಚುನಾವಣೆಗೆ ಪ್ರಚಾರಕ್ಕೆ ಬರೋ ರಾಜಕಾರಣಿಗಳೆಲ್ಲಾ ಸುತ್ತೂರು ಮಠಕ್ಕೆ ಪ್ರದಕ್ಷಿಣೆ ಹಾಕಿ, ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ನಿರ್ಣಾಯಕರಾಗಿರುವ ಲಿಂಗಾಯತರ ಮತಗಳನ್ನು ಸೆಳೆಯಲು ರಣತಂತ್ರ ಹೂಡುತ್ತಿದ್ದಾರೆ.

ಇದೇ ಮಾರ್ಚ್ 12 ರಂದು ಸುತ್ತೂರು ಮಠಕ್ಕೆ ದಿಢೀರ್ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಮಠದಲ್ಲೇ ತಿಂಡಿ ತಿಂದು, ಶ್ರೀಗಳ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ರು. ಅಲ್ಲದೆ ತಮ್ಮ ಪಕ್ಷದ ಅಭ್ಯರ್ಥಿಗಳಾದ ಕಳಲೆ ಕೇಶವ ಮೂರ್ತಿ ಹಾಗೂ ಗೀತ ಮಹದೇವಪ್ರಸಾದ್‍ರನ್ನು ಶ್ರೀಗಳಿಗೆ ಪರಿಚಯಿಸಿ ಚುನಾವಣೆಯಲ್ಲಿ ಜಯಗಳಿಸಲು ನಿಮ್ಮ ಆರ್ಶಿವಾದ ಬೇಕು ಅಂತ ಕೇಳಿಕೊಂಡಿದ್ರು.

ಇದಕ್ಕೆ ಪ್ರತಿತಂತ್ರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಹ ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಗುಂಡ್ಲುಪೇಟೆ ಅಭ್ಯರ್ಥಿ ನಿರಂಜನ್ ಕುಮಾರ್‍ರನ್ನ ಶ್ರೀಗಳಿಗೆ ಪರಿಚಯಿಸಿ, ಆಶೀರ್ವದಿಸುವಂತೆ ಮನವಿ ಮಾಡಿದ್ದಾರೆ.

ಸುತ್ತೂರು ಶ್ರೀಗಳು ಮಾತ್ರ ಯಾವ ಪಕ್ಷದೊಂದಿಗೂ ಗುರುತಿಸಿಕೊಳ್ಳದೆ, ಬಂದವರಿಗೆಲ್ಲಾ ನಗು ನಗುತ್ತಲೇ ಆಶೀರ್ವಾದ ಮಾಡ್ತಿದ್ದಾರೆ.

Comments

Leave a Reply

Your email address will not be published. Required fields are marked *