50 ಕೋಟಿ ನೀಡುವಂತೆ ಬೆದರಿಕೆ – ಹೆಚ್‌ಡಿಕೆ, ರಮೇಶ್ ಗೌಡ ವಿರುದ್ಧ ದೂರು

–  ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಜಯ್ ಟಾಟಾ ದೂರು

ಬೆಂಗಳೂರು: ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಪರಿಷತ್‌ ಸದಸ್ಯ ರಮೇಶ್ ಗೌಡ (Ramesh Gowda) ವಿರುದ್ಧಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

50 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಉದ್ಯಮಿ ಹಾಗೂ ಜೆಡಿಎಸ್ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷ ವಿಜಯ್ ಟಾಟಾ (Vijaya Tata) ಎಂಬುವರು ದೂರು ನೀಡಿದ್ದಾರೆ.

ಜೆಡಿಎಸ್ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷ ವಿಜಯ್ ಟಾಟಾ
ಜೆಡಿಎಸ್ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷ ವಿಜಯ್ ಟಾಟಾ

ದೂರಿನಲ್ಲಿ ಏನಿದೆ?
ಚನ್ನಪಟ್ಟಣ ಉಪಚುನಾವಣೆಗೆ (Channapatna By Election) ನಿಖಿಲ್ ಕುಮಾರಸ್ವಾಮಿ (Nikhil Kumaraswami) ಟಿಕೆಟ್ ಫಿಕ್ಸ್ ಆಗಿದೆ. ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು 50 ಕೋಟಿ ರೂ. ಹೊಂದಿಸಿಕೊಡಬೇಕು. ಹಣ ಹೊಂದಿಸಿ ಕೊಡದಿದ್ದರೆ ನಾನು ಏನು ಮಾಡುತ್ತೇನೋ ಗೊತ್ತಿಲ್ಲ.

ನೀನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ. ನೀನು ಇಲ್ಲಿ ಬದುಕುವುದೇ ಕಷ್ಟವಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌

ಮಾಜಿ ಎಂಎಲ್‌ಸಿ ರಮೇಶ್ ಗೌಡ 50 ಕೋಟಿ ರೂ. ಹಣ ಹೊಂದಿಸಿಕೊಡು. ನಾನು ದೇವಸ್ಥಾನ, ಶಾಲೆ ಅಭಿವೃದ್ಧಿ ಮಾಡುತ್ತಿದ್ದು ನನಗೂ 5 ಕೋಟಿ ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಹಣ ಕೊಡದೇ ಹೋದರೆ ನಿಮಗೂ ತೊಂದರೆಗಳು ಎದುರಾಗಲಿದೆ. ರಮೇಶ್ ಗೌಡ ನನಗೆ ಆಗಸ್ಟ್ 30, ಸೆಪ್ಟೆಂಬರ್ 06, ಮತ್ತು 11 ರಂದು ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ.

ಹೆಚ್‌ಡಿ ಕುಮಾರ ಸ್ವಾಮಿ ಮತ್ತು ರಮೇಶ್ ಗೌಡ ನನ್ನ ವಿರುದ್ಧ ಷಡ್ಯಂತ್ರ ಮಾಡಿ 50 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಿ ಹೆಚ್ ಡಿ ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.