ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯಲ್ಲಿ ಶಿಯಾ (Shia) ಮತ್ತು ಸುನ್ನಿ (Sunni) ಮುಸ್ಲಿಮರ ಮಧ್ಯೆ ಘರ್ಷಣೆ ನಡೆಯುತ್ತಿದ್ದು ಇಲ್ಲಿಯವರೆಗೆ 46 ಮಂದಿ ಸಾವನ್ನಪ್ಪಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪಾಕ್‌ನ ʼಡಾನ್‌ʼ ವರದಿ ಮಾಡಿದೆ.

ಕೃಷಿ ಬಿತ್ತನೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಆರಂಭವಾದ ಸಣ್ಣ ವಿವಾದ ಈಗ ಘರ್ಷಣೆಗೆ ತಿರುಗಿ ಭಾರೀ ಹಿಂಸಾಚಾರ ನಡೆಯುತ್ತಿದೆ. ಇದನ್ನೂ ಓದಿ: ಲೋಕಾಯುಕ್ತ FIR ಬೆನ್ನಲ್ಲೇ ಸಿಎಂಗೆ ಇಡಿ ಭಯ; ಇ-ಮೇಲ್ ಮೂಲಕ ಸ್ನೇಹಮಯಿ ಕೃಷ್ಣ ದೂರು

ಸೆ.21 ರಂದು ಆರಂಭಗೊಂಡ ಹಿಂಸಾಚಾರವನ್ನು ನಿಲ್ಲಿಸಲು ಜಿಲ್ಲಾಡಳಿತ, ಪೊಲೀಸ್, ಮಿಲಿಟರಿ ಮತ್ತು ಸ್ಥಳೀಯ ಬುಡಕಟ್ಟು ಹಿರಿಯರು ಸತತ ಮಾತುಕತೆ ನಡೆಸುತ್ತಿದ್ದರೂ ಘರ್ಷಣೆ ಮುಂದುವರಿದಿದೆ.  ಇದನ್ನೂ ಓದಿ: ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಎರಡೂ ಬಣಗಳು ಜಾಗದ ಹಕ್ಕುಗಳಿಗೆ ಮಾತ್ರವಲ್ಲದೇ ಪಂಥೀಯ ಭಾವನೆಯ ಅಡಿ ಪರಸ್ಪರ ಸಂಘರ್ಷಕ್ಕೆ ಇಳಿದಿವೆ. ಎರಡು ಬಣಗಳ ಸದಸ್ಯರು ಮಿಲಿಟರಿಯವರು ಬಳಸುವ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರಿಂದ ಸಾವು ನೋವು ಹೆಚ್ಚಾಗುತ್ತಿದೆ.

ಈ ಭೂ ವಿವಾದದ ಕಿಚ್ಚು ಈಗ ಕುರ್ರಂ ಜಿಲ್ಲೆಯ 10 ಪ್ರದೇಶಗಳಿಗೆ ಹಬ್ಬಿದೆ. ಈ ಸಂಘರ್ಷದಿಂದ ಪರಚಿನಾರ್-ಪೇಶಾವರ್ ಮುಖ್ಯ ರಸ್ತೆ ಮತ್ತು ಪಾಕಿಸ್ತಾನ-ಅಫ್ಘಾನ್ ಖರ್ಲಾಚಿ ಗಡಿಯನ್ನು ಮುಚ್ಚಲಾಗಿದೆ. ಈ ಪ್ರದೇಶದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಬಂದ್‌ ಮಾಡಲಾಗಿದೆ.