ಮಲಿನವಾಗ್ತಿದೆ ಮಲೆನಾಡಿನ ಕುಮಾರಧಾರಾ- ಪ್ರತಿನಿತ್ಯ ನದಿ ಸೇರ್ತಿದೆ ವಿಷಯುಕ್ತ ತ್ಯಾಜ್ಯ

ಮಂಗಳೂರು: ಶ್ರೀ ಕುಕ್ಕೆಸುಬ್ರಹ್ಮಣ್ಯ ಸಕಲ ಪಾಪ ಪರಿಹಾರ ಮಾಡೋ ಪವಿತ್ರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ. ಇಂತಹ ಪವಿತ್ರ ಕ್ಷೇತ್ರ ಈಗ ಮಲಿನ ಕ್ಷೇತ್ರ ಅಂತಲೂ ಕುಖ್ಯಾತಿ ಪಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿ ಸಂಪೂರ್ಣ ಮಲಿನವಾಗಿದೆ. ಇಲ್ಲಿನ ವ್ಯಾಪಾರಸ್ಥರು, ಹೋಟೆಲ್‍ನವರು ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹಾಕುತ್ತಿರೋದ್ರಿಂದ ನೀರು ಕಲುಷಿತಗೊಂಡಿದೆ. ಕೆಲವೆಡೆ ಚರಂಡಿ ನೀರೂ ಕೂಡ ನದಿಗೆ ಸೇರ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಹರಕೆ ಮುಡಿ ನೀಡ್ತಾರೆ. ಹೆಚ್ಚಿನವರು ಸರ್ಪಸಂಸ್ಕಾರದಂತಹ ಸೇವೆಗಳನ್ನು ಮಾಡಿ ಕುಮಾರಧಾರಾ ನದಿಯಲ್ಲಿ ತೀರ್ಥ ಸ್ನಾನ ಮಾಡುವುದು ವಾಡಿಕೆ. ಆದ್ರೆ ಇಂತಹ ಕಲುಷಿತ ನೀರಲ್ಲಿ ಪಾಪ ಪರಿಹಾರ ಆಗೋ ಬದಲು ರೋಗ ರುಜಿನಗಳು ಅಂಟಿಕೊಳ್ಳುವ ಭೀತಿ ಎದುರಾಗಿದೆ.

ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ 180 ಕೋಟಿ ರೂಪಾಯಿ ವೆಚ್ಚದ ಪ್ಲಾನ್ ಮಂಜೂರು ಮಾಡಿತ್ತು. ಅದರಂತೆ ವಸತಿಗೃಹ, ಬಸ್ ನಿಲ್ದಾಣ, ರಸ್ತೆ ಮೇಲ್ದರ್ಜೆಗೇರಿದ್ದರೂ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇದರ ಮಧ್ಯೆ ಭಕ್ತರು ಕೂಡ ಸ್ನಾನ ಮಾಡಿ ಬಟ್ಟೆಗಳನ್ನು ನದಿಯಲ್ಲೇ ಹಾಕುತ್ತಿದ್ದು, ಇದನ್ನು ಸ್ವಚ್ಛ ಮಾಡುವ ವ್ಯವಸ್ಥೆ ಇಲ್ಲ.

ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುತ್ತಿರುವ ದೇವಸ್ಥಾನ. ಆದ್ರೆ ಪರಿಒಸ್ಥಿತಿ ಇದೇ ರೀತಿ ಮುಂದುವರಿದರೆ ಕ್ಷೇತ್ರದ ಹೆಸರು ಹಾಳಾಗಬಹುದು. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿದೆ.

 

Comments

Leave a Reply

Your email address will not be published. Required fields are marked *