ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಮ್ಮ ಕುಟುಂಬದ ಜೊತೆ ಅಮೆರಿಕ (USA) ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ (ಇಂದು) ಮಧ್ಯರಾತ್ರಿಯಿಂದಲೇ ಡಿಕೆಶಿ ಅವರು 7 ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ.

ಡಿ.ಕೆ ಶಿವಕುಮಾರ್ ಅವರೊಂದಿಗೆ ಪತ್ನಿ ಉಷಾ, ಪುತ್ರಿಯರಾದ ಐಶ್ವರ್ಯ, ಆಭರಣ, ಪುತ್ರ ಆಕಾಶ್ ಅಳಿಯ ಅಮರ್ತ್ಯ ಸುಬ್ರಹ್ಮಣ್ಯ ಹೆಗ್ಡೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಗೆ ಪ್ರಾಯೋಜಕತ್ವ ನಿಲ್ಲಿಸಿದ್ರೆ ಪಾಕ್‌ ಜೊತೆ ಮಾತುಕತೆಗೆ ಭಾರತ ಸಿದ್ಧ: ರಾಜನಾಥ್‌ ಸಿಂಗ್‌

ಪ್ರವಾಸದ ವೇಳೆ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (US Elections) ಸ್ಪರ್ಧಿಸಿರೋ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭೇಟಿಗೆ ಡಿಸಿಎಂ ಕಚೇರಿ ಸಮಯ ಕೇಳಿದೆ. ಇದುವರೆಗೂ ಭೇಟಿ ಬಗ್ಗೆ ಖಚಿತವಾಗಿಲ್ಲ. ಖಾಸಗಿ ಕಾರ್ಯಕ್ರಮಗಳ ನಡುವೆ ಭೇಟಿಗೆ ಅವಕಾಶ ಸಿಕ್ಕರೆ ಇಬ್ಬರನ್ನೂ ಭೇಟಿ ಮಾಡುವ ಸಾಧ್ಯತೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮಧ್ಯೆ ಡಿ.ಕೆ ಶಿವಕುಮಾರ್ ಅವರಿಗೆ ಕಮಲಾ ಹ್ಯಾರಿಸ್ (Kamala Harris) ಅವರಿಂದ ವಿಶೇಷ ಆಹ್ವಾನ ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ಎಕ್ಸ್‌ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ನನ್ನ ಮುಂಬರುವ ಭೇಟಿಗೆ ಸಂಬಂಧಿಸಿದಂತೆ, ಹಬ್ಬಿರುವ ವದಂತಿಯನ್ನು ಹೋಗಲಾಡಿಸಲು ನಾನು ಬಯಸುತ್ತೇನೆ. ನನ್ನ ಭೇಟಿಯು ಸಂಪೂರ್ಣವಾಗಿ ವೈಯಕ್ತಿಕ ಕಾರಣಗಳಿಗಾಗಿ ಆಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶಕ್ಕೆ ಸಂಬಂಧಿಸಿಲ್ಲ, ಜೊತೆಗೆ ರಾಜಕೀಯ ಆಹ್ವಾನದ ಕಾರಣದಿಂದಲೂ ಅಲ್ಲ. ಯಾವುದೇ ರೀತಿಯ ಊಹಾಪೋಹಗಳಿಗೆ ಒಳಗಾಗದಂತೆ ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದೇನೆ.

ಅಲ್ಲದೇ ಸೆಪ್ಟೆಂಬರ್ 9 ಹಾಗೂ 12 ರಂದು ಸಿಎಂ ಪ್ರಾಸಿಕ್ಯೂಷನ್ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳುವ ಮುನ್ನ ಮುಖ್ಯಮಂತ್ರಿಗಳನ್ನು ಡಿಸಿಎಂ ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತದಿಂದ ಶೇಖ್ ಹಸೀನಾ ಗಡಿಪಾರಿಗೆ ಅಗತ್ಯ ಕ್ರಮ: ಬಾಂಗ್ಲಾ ಎಚ್ಚರಿಕೆ

ಪ್ರಾಸಿಕ್ಯೂಷನ್ ವಿಚಾರ, ನಿಗಮ ಮಂಡಳಿಗೆ ನಿರ್ದೇಶಕರು ಹಾಗೂ ಸದಸ್ಯರ ನೇಮಕ ಪಟ್ಟಿಯನ್ನು ಅಂತಿಮ ಗೊಳಿಸುವ ಸಂಬಂಧ ಸಿಎಂ ಜೊತೆ ಡಿಸಿಎಂ ಚರ್ಚೆ ನಡೆಸಿದ್ರು ಯಾವುದೇ ಪ್ರತಿಕ್ರಿಯೆ ಕೊಡದೇ ಕೈಮುಗಿದು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ