ಸೆರೆಸಿಕ್ಕ ಕಾಡಾನೆಗಳಿಗೆ ದುಬಾರೆಯಲ್ಲಿ ಟ್ರೈನಿಂಗ್!

ಮಡಿಕೇರಿ: ಮಂಜಿನ ನಗರಿಯ ಕಾಫಿತೋಟಗಳಲ್ಲಿ ಬೀಡುಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಗಳನ್ನು ಸೆರೆಹಿಡಿದು ಪಳಗಿಸುವ ಕಾರ್ಯ ನಡೀತಿದೆ. ದುಬಾರೆ ಆನೆ ಶಿಬಿರದ ಪ್ರತ್ಯೇಕ ಕ್ರಾಲ್‍ಗಳಲ್ಲಿ ಪುಂಡಾನೆಗಳನ್ನು ಕೂಡಿಟ್ಟು ತರಬೇತಿ ನೀಡಲಾಗುತ್ತಿದ್ದು, ಮಾವುತರು ನಿತ್ಯವೂ ಈ ಆನೆಗಳಿಗೆ ಪಾಠ ಮಾಡ್ತಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಸೋಮವಾರಪೇಟೆಯ ಸಿದ್ದಾಪುರ, ಪಾಲಿಬೆಟ್ಟ ಸುತ್ತಮುತ್ತ ಆತಂಕ ಸೃಷ್ಟಿಸಿದ್ದ ನಾಲ್ಕು ಪುಂಡಾನೆಗಳನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಸದ್ಯ ಈ ಪುಂಡಾನೆಗಳಿಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಟ್ರೈನಿಂಗ್ ನೀಡಲಾಗ್ತಿದೆ. ಪ್ರತಿನಿತ್ಯ ಹುಲ್ಲು, ಭತ್ತ, ಕಾಡು ಸೊಪ್ಪು ಕೊಟ್ಟು ಕಾಡಾನೆಗಳ ಆರ್ಭಟವನ್ನ ತಣ್ಣಗಾಗಿಸಲು ಪ್ರಯತ್ನಿಸಲಾಗ್ತಿದೆ.

ಸೆರೆಹಿಡಿದ ಆನೆಗಳನ್ನು ಕ್ರಾಲ್‍ಗಳಲ್ಲಿ ಬಂಧಿಸಿಡಲಾಗಿದೆ. ಮೊದಲು ಮಾವುತರು ಆನೆಗಳ ಸ್ವಭಾವ ಅರಿತು ಹಂತ ಹಂತವಾಗಿ ತರಬೇತಿ ನೀಡುತ್ತಾರೆ. ಕನಿಷ್ಟ ಮೂರು ತಿಂಗಳ ತರಬೇತಿ ನಂತರ ಕಾಡಾನೆಗಳ ಆರ್ಭಟವನ್ನು ತಣ್ಣಗಾಗಿಸಲಾಗುತ್ತೆ. ಸಾಕಾನೆಗಳನ್ನು ಬಂಧಿಯಾದ ಕಾಡಾನೆಗಳ ಬಳಿ ಕರೆತಂದು ಮೃದುವಾಗಿಸಲಾಗುತ್ತಿದೆ.

ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕೊಂದು ಅತಂಕಕ್ಕೆ ಕಾರಣವಾಗಿದ್ದ ಕಾಡಾನೆಗಳು ಬಂಧಿಯಾಗಿವೆ. ಆದ್ರೆ ಆನೆ, ಮಾನವ ಸಂಘರ್ಷ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದಕ್ಕೆ ಶಾಶ್ವತವಾಗಿ ಮುಕ್ತಿ ಹಾಡಲು ಅರಣ್ಯ ಇಲಾಖೆ ಮುಂದಾಗಬೇಕು ಅಂತಾ ಜಿಲ್ಲೆಯ ಜನ ಆಗ್ರಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *