ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು

ಬೆಳಗಾವಿ: ಕಿತ್ತೂರು (Kitturu) ಪಟ್ಟಣ ಪಂಚಾಯತಿ ಬಿಜೆಪಿ (BJP) ಸದಸ್ಯ ನಾಗೇಶ್ ಅಸುಂಡಿ ಅಪಹರಣ ಪ್ರಕರಣ ಸಂಬಂಧ ಸ್ಥಳೀಯ ಕಾಂಗ್ರೆಸ್‌ (Congress) ಶಾಸಕರ ಮೂವರು ಆಪ್ತರ ವಿರುದ್ಧ ದೂರು ದಾಖಲಾಗಿದೆ. ನಾಗೇಶ್‌ ಅಪಹರಣ ಆದ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ತಡರಾತ್ರಿ ಕಿತ್ತೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಚೌಕಿಮಠ ಕ್ರಾಸ್ ಬಳಿ ನಾಗೇಶ್ ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದಾಗ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ದ್ವೇಷದ ಪೋಸ್ಟ್‌ – ವಿಜಯೇಂದ್ರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ನಾಗೇಶ್ ಅಸುಂಡಿ ತಂದೆ ಬಸವರಾಜ್ ಅಸುಂಡಿ ನೀಡಿದ ದೂರಿನ ಮೇರೆಗೆ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಆಪ್ತ ಅಶೋಕ್ ಮಾಳಗಿ, ಬಸವರಾಜ್ ಸಂಗೊಳ್ಳಿ, ಸುರೇಶ್ ಕುದರೇಮನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಾಗೇಶ್‌ ಅಸುಂಡಿ ಶೋಧಕ್ಕೆ ಬೈಲಹೊಂಗಲ ಡಿವೈಎಸ್‌ಪಿ ರವಿ ಡಿ.ನಾಯಕ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಇದನ್ನೂ ಓದಿ: ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ