ಲಕ್ನೋ ಎನ್‍ಕೌಂಟರ್: ‘ಪ್ರಾಕ್ಟೀಸ್’ಗಾಗಿ ರೈಲು ಸ್ಫೋಟ, ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರರು

ಲಕ್ನೋ: ಉತ್ತರಪ್ರದೇಶದ ಲಕ್ನೋ ಬಳಿಯಿರುವ ಠಾಕುರ್‍ಘಂಜ್‍ನಲ್ಲಿ ಮಂಗಳವಾರದಂದು ಓರ್ವ ಶಂಕಿತ ಐಸಿಸ್ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದು, ಮಧ್ಯಪ್ರದೇಶ ಹಾಗೂ ಕಾನ್ಪುರದಿಂದ ಇತರೆ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಇವರು ಐಸಿಸ್‍ನ ಭಾಗವಾದ ಹೊಸ ಉಗ್ರ ಸಂಘನೆಗೆ ಸೇರಿದ್ದವರು ಎನ್ನಲಾಗಿದ್ದು ಶೀಘ್ರದಲ್ಲೇ ದೊಡ್ಡ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತನಿಖಾಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಉತ್ತರಪ್ರದೇಶದ ಬಾರಾಬಂಕಿಯ ಸೂಫಿ ದರ್ಗಾ ಮೇಲೆ ದಾಳಿ ನಡೆಸುವ ಸಲುವಾಗಿ ಇವರು ಅಭ್ಯಾಸಕ್ಕಾಗಿ ಮಧ್ಯಪ್ರದೇಶದಲ್ಲಿ ಮಂಗಳವಾರದಂದು ರೈಲು ಸ್ಫೋಟ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಶಂಕಿತ ಐಸಿಸ್ ಉಗ್ರ ಸಂಘಟನೆಯಲ್ಲಿ 9 ಮಂದಿಯಿದ್ದು ಎಲ್ಲರೂ ಲಕ್ನೋ ಹಾಗೂ ಕಾನ್ಪುರದವರಾಗಿದ್ದಾರೆ ಎಂದು ರಾಷ್ಟೀಯ ತನಿಖಾ ದಳದ ಮೂಲಗಳು ತಿಳಿಸಿವೆ.

ಮಂಗಳವಾರದಂದು ಠಾಕುರ್‍ಘಂಜ್‍ನ ಮನೆಯೊಂದರಲ್ಲಿದ್ದ ಶಂಕಿತ ಐಸಿಸ್ ಉಗ್ರ ಸೈಫುಲ್ಲಾನನ್ನು ಪೊಲೀಸರು ಹೊಡೆದುರುಳಿಸಿದ್ದರು. ಈ ಸಂಘಟನೆಯವರು ಕೆಲವು ತಿಂಗಳ ಹಿಂದಷ್ಟೆ ಮನೆಯನ್ನು ಬಾಡಿಗೆ ಪಡೆದಿದ್ದರು ಎಂದು ಹೇಳಲಾಗಿದೆ. ಸುಮಾರು 12 ಗಂಟೆಗಳ ಕಾರ್ಯಾಚರಣೆ ನಡೆಸಿದ ಕಮಾಂಡೋಗಳು ಸೈಫುಲ್ಲಾನನ್ನು ಜೀವಂತವಾಗಿ ಸೆರೆಹಿಡಿಯಲು ಪ್ರಯತ್ನಿಸಿದ್ರು. ಆದ್ರೆ ಆತ ಶರಣಾಗಲು ನಿರಾಕರಿಸಿದ್ದರಿಂದ ಅಂತಿಮವಾಗಿ ಗೋಡೆಗೆ ರಂಧ್ರ ಕೊರೆದು ಕೊಠಡಿಗೆ ಪ್ರವೇಶಿಸಿ ಆತನನ್ನು ಹತ್ಯೆಗೈದರು. ಸೈಫುಲ್ಲಾ ಮೃತದೇಹದ ಬಳಿ 8 ಪಿಸ್ತೂಲ್, 650 ಮದ್ದುಗುಂಡುಗಳು, ಪಾಸ್ಪೋರ್ಟ್, ಸಿಮ್‍ಕಾರ್ಡ್‍ಗಳು, ಐಸಿಸ್ ಧ್ವಜ ಹಾಗು ರೈಲುಗಳ ವೇಳಾಪಟ್ಟಿ ಪತ್ತೆಯಾಗಿತ್ತು.

ಈ ಸಂಘಟನೆಯ ನೇತೃತ್ವ ವಹಿಸಿರುವ ವ್ಯಕ್ತಿಯನ್ನು ಅತಿಫ್ ಮುಜಾಫರ್ ಎಂದು ಗುರುತಿಸಲಾಗಿದ್ದು, ಮಂಗಳವಾರದಂದು ಮಧ್ಯಪ್ರದೇಶದಲ್ಲಿ ಈತನೊಂದಿಗೆ ಮತ್ತಿಬ್ಬರನ್ನು ಬಂಧಿಸಲಾಗಿದೆ. ಭೋಪಾಲ್‍ನಿಂದ ಉಜ್ಜೈನ್‍ಗೆ ಹೊರಟಿದ್ದ ರೈಲಿನಲ್ಲಿ ಸ್ಫೋಟ ಸಂಭವಿಸಿ 9 ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಇವರನ್ನು ಬಂಧಿಸಲಾಗಿದೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಸೈಫುಲ್ಲಾ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾಗೂ ಇವರ ಮಾಹಿತಿಯನ್ನಾಧರಿಸಿ ಕಾನ್ಪುರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ 20 ವರ್ಷ ಆಸುಪಾಸಿನ ವಯಸ್ಸಿನವರಾಗಿದ್ದಾರೆ.

Comments

Leave a Reply

Your email address will not be published. Required fields are marked *