ಮೊಹಮ್ಮದ್‌ ಶಮಿ ಕಂಬ್ಯಾಕ್‌ ಯಾವಾಗ? ಜಯ್‌ ಶಾ ಹೇಳಿದ್ದೇನು?

ಮುಂಬೈ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವೇಗಿ ಮೊಹಮ್ಮದ್ ಶಮಿ (Mohammed Shami) ಆಡುವ ಕುರಿತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವರದಿಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕಳೆದ ನವೆಂಬರ್‌ನಲ್ಲಿ ನಡೆದ ODI ವಿಶ್ವಕಪ್‌ ಬಳಿಕ ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ಸಿದ್ಧರಾಗುತ್ತಾರೆ ಎಂಬ ನಿರೀಕ್ಷೆಯಿದೆ. ಶಮಿ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ಅಂತಿಮ ಹಂತದಲ್ಲಿದ್ದಾರೆ. ಇದನ್ನೂ ಓದಿ: WTC ಅಂಕಪಟ್ಟಿಯಲ್ಲಿ ಭಾರತ ಮತ್ತೆ ನಂ.1 – 2ನೇ ಸ್ಥಾನಕ್ಕೆ ಕುಸಿದ ಆಸೀಸ್‌

ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ಕಳೆದ ತಿಂಗಳಿಂದ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ‘ಆಸ್ಟ್ರೇಲಿಯಾ ಸರಣಿಯಲ್ಲಿ ಶಮಿ ಆಡುತ್ತಾರೋ ಇಲ್ಲವೋ ಎಂಬುದು ಅವರ ಫಿಟ್‌ನೆಸ್‌ಗೆ ಸಂಬಂಧಿಸಿದ್ದು. ಎನ್‌ಸಿಎ ವರದಿಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಶಮಿ ಕಂಬ್ಯಾಕ್‌ ಬಗ್ಗೆ ಜಯ್‌ ಶಾ (Jay Shah) ಸುಳಿವು ನೀಡಿದ್ದಾರೆ.

ಜುಲೈನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸಕ್ಕೆ ಹೊರಡುವ ಮೊದಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು, ಶಮಿ ಬೌಲಿಂಗ್ ಪ್ರಾರಂಭಿಸಿದ್ದಾರೆ ಎಂದು ಖಚಿತಪಡಿಸಿದ್ದರು. ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಂದು ಚೆನ್ನೈನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್‌ನಲ್ಲಿ ಶಮಿ ಆಡಬಹುದೆಂಬ ನಿರೀಕ್ಷೆಯಿದೆ ಎಂದಿದ್ದರು. ಇದನ್ನೂ ಓದಿ: ದ್ರಾವಿಡ್ ಪುತ್ರನ ಸಿಕ್ಸ್ – ವಿಡಿಯೋ ವೈರಲ್‌, ಅಭಿಮಾನಿಗಳ ಮೆಚ್ಚುಗೆ

ಶಮಿ ಟೀಂ ಇಂಡಿಯಾ ಪರ ಮೂರು ಫಾರ್ಮ್ಯಾಟ್‌ಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇಲ್ಲಿವರೆಗೆ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದು, 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್‌ ಕಬಳಿಸಿದ್ದಾರೆ. 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 25 ವಿಕೆಟ್‌ ಕಿತ್ತಿದ್ದಾರೆ.