ಮಂಡ್ಯದಲ್ಲಿ ಮೆಡಿಕಲ್ ಮಾಫಿಯಾ; ಲೋಕಾಯುಕ್ತ ದಾಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ಮೆಡಿಸಿನ್ ಪತ್ತೆ

– ಅವಧಿ ಮುಗಿದ 40 ಲಕ್ಷ ಮೌಲ್ಯದ ರೆಮ್ಡಿಸಿವರ್

ಮಂಡ್ಯ: ಕೊರೊನಾ ಕಾಲದಲ್ಲಿ ರೆಮ್ಡಿಸಿವರ್ ಎಂಬ ಇಂಜೆಕ್ಷನ್‌ಗೆ ಜನರು ಪರದಾಡುತ್ತಿದ್ದರು. ಈ ಇಂಜೆಕ್ಷನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ 1 ರಿಂದ‌ 2 ಲಕ್ಷದವರೆಗೆ ತೆಗೆದುಕೊಂಡಿದ್ದಾರೆ. ಇದೀಗ 40 ಲಕ್ಷ ಮೌಲ್ಯದ ಅವಧಿ ಮುಗಿದಿರುವ ಇದೇ ರೆಮ್ಡಿಸಿವರ್ ಮೆಡಿಸನ್ ಮಂಡ್ಯದ ಮಿಮ್ಸ್‌ನ ಔಷಧಿ ಉಗ್ರಾಣದಲ್ಲಿ ಇರುವುದು ಕಂಡುಬಂದಿದೆ.

ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವಧಿಗೆ ಮೀರಿನ ಲಕ್ಷಾಂತರ ರೂಪಾಯಿಯ ಮೆಡಿಸಿನ್ ಇದ್ದು, ಅಧಿಕಾರಿಗಳು ಏಜೆನ್ಸಿಯವರೊಂದಿಗೆ ಮೆಡಿಕಲ್‌ ಮಾಫಿಯಾದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎಂದು ಕೇಶವಮೂರ್ತಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದರು. ದೂರಿನ ಅನ್ವಯ ಮಿಮ್ಸ್‌ನ ಔಷಧಿ ಉಗ್ರಾಣದ ಮೇಲೆ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ರೇಡ್ ಮಾಡಲಾಗಿದೆ.

ಈ ರೇಡ್‌ನಲ್ಲಿ ಪ್ರಮುಖವಾಗಿ ಕೊರೊನಾ ಕಾಲದಲ್ಲಿ ಬಹು ಬೇಡಿಕೆ ಇದ್ದ ರೆಮ್ಡಿಸಿವರ್ ಇಂಜೆಕ್ಷನ್ ಎಕ್ಸ್ಪೆರಿಯಾಗಿ ಇರೋದು ಕಂಡು ಬಂದಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 40 ಲಕ್ಷ ಮೌಲ್ಯದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ 2022ರಲ್ಲಿಯೇ ಮುಕ್ತಾಯವಾಗಿದೆ. ಕೊರೊನಾ ಸಂದರ್ಭದಲ್ಲಿ ಈ ಇಂಜೆಕ್ಷನ್ ಕೇಳಿದ್ರೆ ಮಿಮ್ಸ್‌ನ ಅಧಿಕಾರಿ ವರ್ಗ ನಮ್ಮ ಬಳಿ ಸ್ಟಾಕ್ ಇಲ್ಲ ಎಂಬ ಮಾತನ್ನು ಹೇಳುತ್ತಿತ್ತು. ಆದರೆ ಇದೀಗ ಅದೇ ರೆಮ್ಡಿಸಿವರ್ ಇಂಜೆಕ್ಷನ್ ಅಪಾರ ಮಟ್ಟದಲ್ಲಿ ಅವಧಿ ಮುಕ್ತಾಯಗೊಂಡಿದೆ.

ಕೇವಲ ರೆಮ್ಡಿಸಿವರ್ ಮಾತ್ರವಲ್ಲ ಬೇರೆ ಬೇರೆ ರೋಗಗಳಿಗೆ ನೀಡುವ ಔಷಧಿ, ಮಾತ್ರೆ, ಇಂಜೆಕ್ಷನ್‌ನ ಅವಧಿಯೂ ಮುಕ್ತಾಯವಾಗಿದೆ. ಇವುಗಳ ಮೌಲ್ಯವು ಲಕ್ಷಾಂತರ ರೂಪಾಯಿ ಆಗಿವೆ. ಈ ಅಪಾರ ಪ್ರಮಾಣ ನಷ್ಟ ಸರ್ಕಾರಕ್ಕೆ ಉಂಟಾಗಿದೆ.

ಏನಿದು ಮೆಡಿಕಲ್ ಮಾಫಿಯಾ?
ಮಂಡ್ಯದ ಮಿಮ್ಸ್ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಒಂದಷ್ಟು ಮೆಡಿಸಿನ್ ಏಜೆನ್ಸಿಗಳು ಔಷಧಿ, ಇಂಜೆಕ್ಷನ್, ಮಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸರಬರಾಜು ಮಾಡುತ್ತವೆ. ಈ ಸರಬರಾಜು ಆದ ಮೆಡಿಸಿನ್‌ಗಳ ಅವಧಿ ಮುಕ್ತಾಯದ ಎರಡು ಅಥವಾ ಮೂರು ತಿಂಗಳ ಮುಂಚೆಯೇ ಆಯಾ ಏಜೆನ್ಸಿ ಅವರಿಗೆ ಆ ಮೆಡಿಸಿನ್‌ನ್ನು ವಾಪಸ್ಸು ನೀಡಿದ್ರೆ, ಅವರು ಹೊಸ ಮೆಡಿಸಿನ್‌ನ್ನು ನೀಡ್ತಾರೆ. ಅಲ್ಲಿಗೆ ಯಾವುದೇ ಹಣ ವ್ಯಯವಾಗುವುದಿಲ್ಲ.

ಈ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡದೇ ಏಜೆನ್ಸಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಮೆಡಿಸಿನ್‌ಗಳು ಅವಧಿ ಮುಗಿಯುವವರೆಗೆ ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಈಗ ಆ ಮೆಡಿಸಿನ್‌ಗಳನ್ನು ಸಂಬಂಧಪಟ್ಟ ಏಜೆನ್ಸಿ ವಾಪಸ್ಸು ಪಡೆಯುವುದಿಲ್ಲ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಬೀಳ್ತಾ ಇದೆ.

ಡ್ರಗ್‌ಗೆ ಸಂಬಂಧಿಸಿದ ಅಧಿಕಾರಿಗಳು ಮೊದಲೇ ಏಜೆನ್ಸಿ ಅವರೊಂದಿಗೆ ಮಾತಾಡಿಕೊಂಡು ಎರಡು ತಿಂಗಳಲ್ಲಿ ಅವಧಿ ಮುಗಿಯುವ ಮೆಡಿಸಿನ್‌ನ್ನು ಕೊಡಲು ಹೇಳ್ತಾರೆ. ಎರಡು ತಿಂಗಳು ಅವಧಿ ಮುಗಿಯುವ ಮೆಡಿಸಿನ್‌ಗೆ ಏಜೆನ್ಸಿ ಅವರು ಬಾರಿ ರಿಯಾಯಿತಿಯನ್ನು ಕೊಡ್ತಾರೆ. ಉದಾಹರಣೆಗೆ 10 ರೂ. ಒಂದು ಮಾತ್ರೆ ಎರಡು ತಿಂಗಳಲ್ಲಿ ಅವಧಿ ಮುಗಿಯುತ್ತಿದ್ರೆ, ಅದಕ್ಕೆ ಕೇವಲ ಮೂರು ರೂಪಾಯಿಯನ್ನು ಬಿಲ್ ಮಾಡ್ತಾರೆ. ಈ ಮೆಡಿಸಿನ್‌ನ್ನು ಖರೀದಿ ಮಾಡುವ ಅಧಿಕಾರಿಗಳು ಏಜೆನ್ಸಿ ಅವರಿಗೆ 3 ರೂ. ನೀಡಿ, ಸರ್ಕಾರಕ್ಕೆ 10 ರೂ. ಬಿಲ್ ತೋರಿಸುತ್ತಾರೆ. ಆ ಮೂಲಕ ಮೆಡಿಸಿನ್ ಮಾಫಿಯಾ ಮೂಲಕ ಲಕ್ಷಾಂತರ ರೂ. ಹಣ ಸರ್ಕಾರದ ಜೇಬಿಗೆ ಕತ್ತರಿ ಬೀಳ್ತಾ ಇದೆ.