ರಾಜ್ಯ ಬಿಜೆಪಿಯಲ್ಲಿ ಮತ್ತೆ ಜೋರಾದ ಭಿನ್ನಮತ – ‘ದೋಸ್ತಿ’ ಪಾದಯಾತ್ರೆಗೆ ಬಿಜೆಪಿ ರೆಬೆಲ್ಸ್ ಠಕ್ಕರ್?

– ಕುಂದಾನಗರಿಯಲ್ಲಿ ಬಿಜೆಪಿ ಬಂಡಾಯ ನಾಯಕರ ಸಭೆ

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಭಿನ್ನಮತ ಜೋರಾಗಿದೆ. ಮೈಸೂರು ಪಾದಯಾತ್ರೆ ಸಮಾರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದಾಳತ್ವ ವಹಿಸಿ ಯಶಸ್ವಿಯಾಗಿದ್ದರು. ಆದರೆ, ಇದು ಬಿಜೆಪಿ ರೆಬೆಲ್ ನಾಯಕರ ಕಣ್ಣು ಕೆಂಪಾಗಿಸಿದೆ.

ಬಿಜೆಪಿ ಬಂಡಾಯ (BJP Rebels) ನಾಯಕರು ಬೆಳಗಾವಿಯಲ್ಲಿ (Belagavi) ಜಾಂಬೋಟಿ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ಸಭೆ ಸೇರಿದ್ದರು. ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ, ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಕುಮಾರ ಬಂಗಾರಪ್ಪ, ಬಿಎಸ್‌ವೈ ಆಪ್ತ ಎನ್.ಆರ್.ಸಂತೋಷ್ ಸೇರಿದಂತೆ 10ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಬ್ಯಾಂಡ್ ಬೆಂಗಳೂರು ಆಗದಿರಲಿ: ಬಸವರಾಜ ಬೊಮ್ಮಾಯಿ

ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಕೂಡಲಸಂಗಮದಿಂದ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ. ಸೆಪ್ಟೆಂಬರ್ 17ರಂದು ಅಥವಾ ದೀಪಾವಳಿ ಬಳಿಕ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಮುಹೂರ್ತ ಫಿಕ್ಸ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜೊತೆಗೆ, ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನಾಯಕರೆಲ್ಲರೂ ಒಕ್ಕೊರಲಾಗಿ ಆಕ್ರೋಶ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ. ಸಭೆ ಬಗ್ಗೆ ಪ್ರತಿಕ್ರಿಯಿಸಿರುವ ಅರವಿಂದ ಲಿಂಬಾವಳಿ, ಇದು ಭಿನ್ನಮತ ನಾಯಕರ ಸಭೆ ಅಲ್ಲ. ವಾಲ್ಮೀಕಿ ನಿಗಮ ಹಗರಣ, ಎಸ್‌ಸಿ/ಎಸ್‌ಟಿ ಅನುದಾನ ದುರ್ಬಳಕೆ ವಿರುದ್ಧ ಹೋರಾಟ ಬಗ್ಗೆ ಚರ್ಚೆ ನಡೆದಿದ್ದು, ಮತ್ತೊಂದು ಸುತ್ತಿನ ಸಭೆ ಮಾಡಿ ನಿರ್ಧಾರ ಮಾಡ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಭತ್ತ ನಾಟಿ ಮಾಡಿದ ಹೆಚ್‍ಡಿಕೆ