ರಾಜ್ಯದಲ್ಲಿ ಬರ: ಶತಚಂಡಿಕಾಯಾಗದ ಮೂಲಕ ದೇವಿಯ ಮೊರೆ ಹೋದ ಉಡುಪಿ ಜನ

ಉಡುಪಿ: ರಾಜ್ಯಾದ್ಯಂತ ಭೀಕರ ಬರದ ಪರಿಸ್ಥಿತಿಯಿದೆ. ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಕೊಟ್ಟ ಕಾಸು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಈ ನಡುವೆ ತುಳುನಾಡಿನ ಜನ ಬರ ನೀಗಿಸಮ್ಮ ತಾಯೇ ಅಂತಾ ಶತಚಂಡಿಕಾಯಾಗದ ಮೊರೆ ಹೋಗಿದ್ದಾರೆ.

ರಾಜ್ಯ ಹಿಂದೆಂದೂ ಕಾಣದ ಭೀಕರ ಬರಕ್ಕೆ ತುತ್ತಾಗಿದೆ. ಜನ ಹನಿ ನೀರಿಗಾಗಿ ಹತ್ತಾರು ಕಿ.ಮೀ ಅಲೆದಾಡ್ತಿದ್ದಾರೆ. ಜಾನುವಾರುಗಳು ಮೇವು, ನೀರಿಲ್ಲದೇ ಸಂಕಷ್ಟಕ್ಕೀಡಾಗಿವೆ. ಹೀಗಾಗಿ ಉಡುಪಿಯ ಮಟಪಾಡಿಯ ಉಂಗ್ರಪಳ್ಳಿಯಲ್ಲಿ ಚಂಡಿಕಾ ದುರ್ಗಾಪರಮೇಶ್ವರಿ ದೇವಿಯ ಮೊರೆ ಹೋದ ಜನ ಬರದಿಂದ ನಾಡನ್ನು ರಕ್ಷಿಸು ತಾಯಿ ಅಂತ ಯಾಗ ಮಾಡಿದ್ರು.

ಶತ ಚಂಡಿಕಾಯಾಗದ ಮೂಲಕ ಪ್ರಾರ್ಥನೆ ಮಾಡಿದರೆ ಲೋಕಕಲ್ಯಾಣವಾಗುತ್ತಂತೆ. ಬೇಡಿಕೆ ಈಡೇರುತ್ತಂತೆ. ಅಂದು ಆಂಧ್ರಪ್ರದೇಶದಲ್ಲಿ ಚಂಡಿಕಾಯಾಗ ಮಾಡಿದಾಗ ಹಿಂದೆಂದೂ ಕಂಡರಿಯದ ಮಳೆ ಬಿದ್ದಿತ್ತಂತೆ. ಹೀಗಾಗಿ ಉಡುಪಿಯಲ್ಲಿಯೂ ನಡೆದ ಯಾಗದಲ್ಲಿ ಶಾಸ್ತ್ರೋಕ್ತವಾಗಿ ನೂರಾರು ಬ್ರಾಹ್ಮಣರು ಪಾಲ್ಗೊಂಡಿದ್ರು.

ಲೋಕಕಲ್ಯಾಣಾರ್ಥವಾಗಿ ನಾವಿಂದು ಇಲ್ಲಿ ಬರ ನಿವಾರಣೆಗಾಗಿ ಶತಚಂಡಿಕಾ ಯಾಗವನ್ನು ಕೈಗೊಂಡಿದ್ದೇವೆ. ರಾಜ್ಯದಲ್ಲಿ ಮಳೆ-ಬೆಳೆ ಕಡಿಮೆ ಇದೆ. ಹೀಗಾಗಿ ಈ ವಿಶೇಷ ಯಾಗವನ್ನು ಇಟ್ಟುಕೊಂಡಿದ್ದೇವೆ ಅಂತಾ ದೇವಸ್ಥಾನದ ಅನುಮಂಶಿಕ ಮೊಕ್ತೇಸರ ಸುಬ್ರಹ್ಮಣ್ಯ ಉಂಗ್ರಪಳ್ಳಿ ಹೇಳಿದ್ರು.

ಮಂತ್ರದಿಂದ ಮಾವಿನಕಾಯಿ ಉದುರುತ್ತಾ ಅಂತಾ ಪ್ರಶ್ನೆ ಮಾಡುವವರು ಇದ್ದಾರೆ. ಆದ್ರೆ ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ನಾವು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲೇ ಬೇಕು.

Comments

Leave a Reply

Your email address will not be published. Required fields are marked *